ದೊಡ್ಡಬಳ್ಳಾಪುರ : ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಆ.13ರ “ಕರ್ನಾಟಕಬಂದ್” ಗೆ ದೊಡ್ಡಬಳ್ಳಾಪುರದಲ್ಲಿ ನೈತಿಕ ಬೆಂಬಲವನ್ನಷ್ಟೇ ನೀಡಲಾಗುವುದು. ಅಂದು ಯಾವುದೇ ಬಂದ್ ಆಚರಿಸದೆ, ಪ್ರತಿಭಟನಾ ಮೆರವಣಿಗೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಇಲ್ಲಿನ ಕನ್ನಡ ಸಂಘಟನೆಗಳ ಒಕ್ಕೂಟ ಹಾಗೂ ರೈತ ಸಂಘಟನೆಗಳ ಸಹ ಯೋಗದಲ್ಲಿ ಸೋಮವಾರ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.
ಬಂದ್ ಕರೆ ನೀಡಿದ ಸಂದರ್ಭಕ್ಕೂ, ಪ್ರಸ್ತುತ ಸನ್ನಿವೇಶಕ್ಕೂ ಚಿತ್ರಣ ಬದಲಾಗಿದೆ. ಜಲ ವಿವಾದದ ತೀವ್ರತೆ ಕೊಂಚ ತಗ್ಗಿದೆ. ರಾಜ್ಯದ ಹಲವೆಡೆ ಮಳೆಯಾದ ಪರಿಣಾಮ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಾಧಾರಣ ಪ್ರಮಾಣದ ನೀರು ಶೇಖರಣೆಯಾಗಿದೆ. ಹೀಗಾಗಿ ಸಹಜವಾಗಿಯೇ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಬಂದ್ ಸೂಕ್ತವಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಹಲವು ಮುಖಂಡರು ಅಭಿಪ್ರಾಯಪಟ್ಟರು.
ಹಬ್ಬಗಳು ಹತ್ತಿರವಿದ್ದು, ಜನರಿಗೆ ಅನಗತ್ಯ ತೊಂದರೆ ನೀಡುವುದು ಸರಿಯಲ್ಲ. ಜೊತೆಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಪಾಠಪ್ರವಚನಗಳಿಗೆ ಧಕ್ಕೆಯಾಗಬಾರದು. ಬರದ ಪರಿಸ್ಥಿತಿ ಇರುವುದರಿಂದ ವ್ಯಾಪಾರ ವಹಿವಾಟುಗಳಿಗೂ ಬಂದ್ ಹೆಸರಿನಲ್ಲಿ ಅಡ್ಡಿಯಂಟು ಮಾಡುವುದು ಸರಿಯಲ್ಲ. ಹೀಗಾಗಿ ಈ ಪ್ರಜ್ಞಾಪೂರ್ವಕ ನಿರ್ಧಾರಕೈಗೊಳ್ಳಲಾಗಿದೆ ಎಂದು ಹೇಳಿದರು.
ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸಬೇಕು:
ಕಾವೇರಿ ನೀರಿಗಾಗಿ ಹೋರಾಡುವ ತಾಲ್ಲೂಕಿನ ಜನರು, ಸ್ಥಳೀಯ ಸಮಸ್ಯೆಗಳ ಕಡೆಗೂ ಗಮನ ಹರಿಸುವುದು ಅಗತ್ಯ. ದೊಡ್ಡಬಳ್ಳಾಪುರಕ್ಕೆ ನೀರುಣಿಸುವ ಜಕ್ಕಲಮಡಗು ಸುತ್ತಮುತ್ತ ಒತ್ತುವರಿ ತೆರವು ಮಾಡಬೇಕು. ಗೊರವೇಹಳ್ಳ ಚೆಕ್ ಡ್ಯಾಂ ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಾಗಬೇಕು.ಮರೀಚಿಕೆಯಾಗಿರುವ ಎತ್ತಿನಹೊಳೆ ಯೋಜನೆ ಕೂಡಲೇ ಜಾರಿಗೆ ಬರಬೇಕು. ದೊಡ್ಡಬಳ್ಳಾಪುರಕ್ಕೆ ವಿಷವುಣಿಸಲು ಸಜ್ಜಾಗಿರುವ ವೃಷಭಾವತಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವ ಯೋಜನೆ ಕೈ ಬಿಡಬೇಕು. ಕೈಗಾರಿಕೆ ಇತ್ಯಾದಿ ಕಾರಣಗಳಿಗಾಗಿ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಸೇರಿ ದಂತೆ ವಿವಿದೆಡೆ ಭೂಸ್ವಾದೀನ ಮಾಡಿಕೊಳ್ಳಲು ಹವಣಿಸುತ್ತಿರುವ ಕೆಐಎಡಿಬಿಎ ಈ ಕೂಡಲೇ ಭೂಸ್ವಾದೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳನ್ನು ಮುಂದಿಟ್ಟು ಚಳವಳಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ನಗರಸಭೆ ಮಾಜಿ
ಅಧ್ಯಕ್ಷ ತ.ನ.ಪ್ರಭುದೇವ್, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್, ಕನ್ನಡ ಜಾಗೃತಪರಿಷತ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾವ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕರ್ನಾಟಕ ರಾಜ್ಯ ರೈತಸಂಘದ ಕಾರ್ಯದರ್ಶಿ ಮುತ್ತೇಗೌಡ, ತಾಲೂಕು ಅಧ್ಯಕ್ಷ ಹನುಮೇಗೌಡ, ಜಿಲ್ಲಾಧ್ಯಕ್ಷ ನಾಗಸಂದ್ರ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಸತೀಶ್, ಮುಖಂಡರಾದ ಹನುಮಂತರಾಯಪ್ಪ, ವಾಸು, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ವಿ.ಪರಮೇಶ್, ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಕರವೇ ಶಿವರಾಮೇಗೌಡರ ಬಣದ ಅಧ್ಯಕ್ಷ ಮರುಳಾರಾಧ್ಯ, ಕರವೇ ಪ್ರವೀಣ್ಶೆಟ್ಟಿ ಬಣದ ಅಧ್ಯಕ್ಷ ಹಮಾಮ್ ವೆಂಕಟೇಶ್, ಕಸಾಪ ನಿ.ಪೂ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮುಂತಾದವರು ಉಪಸ್ಥಿತರಿದ್ದರು.
