ಬೆಂಗಳೂರು ಗ್ರಾಮಾಂತರ : ಸಾರ್ವಜನಿಕರ ದೂರುಗಳು ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಮಾರ್ಗದರ್ಶನದಲ್ಲಿ ಮತ್ತು ಲೋಕಾಯುಕ್ತ ಡಿವೈಎಸ್ಪಿ ಗೌತಮ್ ಅವರ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿ, ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಾಗೂ ಅವ್ಯವಸ್ಥೆಗಳ ಬಣ್ಣ ಬಯಲು ಮಾಡಿದ್ದಾರೆ.
ಈ ದಾಳಿಯ ವೇಳೆ ಖಜಾನೆ ಮುಖ್ಯಾಧಿಕಾರಿ ಪ್ರಭಾವತಿ ಅವರ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲದ 1,35,000 ನಗದು ಹಣ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಹಣದ ಮೂಲದ ಬಗ್ಗೆ ತೀವ್ರ ತನಿಖೆ ಮುಂದುವರೆಸಿದ್ದಾರೆ. ಸರ್ಕಾರಿ ಕಚೇರಿಯ ಶಿಸ್ತನ್ನು ಗಾಳಿಗೆ ತೂರಿ, ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಜೀನ್ಸ್ ಸೇರಿದಂತೆ ಅನಧಿಕೃತ ಉಡುಪುಗಳನ್ನು ಧರಿಸಿ ಬಂದಿರುವುದು ಲೋಕಾಯುಕ್ತರ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.ಸಾರ್ವಜನಿಕರ ಕೆಲಸಗಳನ್ನು ವಿಳಂಬಗೊಳಿಸಲು ಅಧಿಕಾರಿಗಳು ನಿರಂತರವಾಗಿ ಬಳಸುತ್ತಿದ್ದ “ಸರ್ವರ್ ಪ್ರಾಬ್ಲಂ” ಎಂಬ ನೆಪವನ್ನು ಲೋಕಾಯುಕ್ತರು ಕಟುವಾಗಿ ಪ್ರಶ್ನಿಸಿದ್ದಾರೆ.
ಅಲ್ಲದೆ ಕಚೇರಿಯಲ್ಲಿ ನೌಕರರ ಹಾಜರಾತಿ ಪುಸ್ತಕವನ್ನು ಸರಿಯಾಗಿ ನಿರ್ವಹಿಸದೆ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ.ಕಚೇರಿಯಲ್ಲಿನ ಅವ್ಯವಸ್ಥೆ ಮತ್ತು ಬೇಜವಾಬ್ದಾರಿ ವರ್ತನೆಯನ್ನು ಕಣ್ಣಾರೆ ಕಂಡ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡು, ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಈ ಕಚೇರಿಯ ಅಕ್ರಮಗಳ ಮೇಲೆ ಲೋಕಾಯುಕ್ತರು ಸಕಾಲಿಕ ದಾಳಿ ನಡೆಸಿರುವುದು ಭ್ರಷ್ಟ ಅಧಿಕಾರಿಗಳಿಗೆ ತೀವ್ರ ನಡುಕ ಹುಟ್ಟಿಸಿದೆ.
