ದೊಡ್ಡಬಳ್ಳಾಪುರ : ತಾಲ್ಲೂಕಿನ ಶಾಸಕರು ವರಮಹಾಲಕ್ಷ್ಮೀ ಹಬ್ಬ, ಗೌರಿಹಬ್ಬದ ಪ್ರಯುಕ್ತ ಶಾಸಕರು ಬೇರೆ ರಾಜ್ಯಗಳಿಂದ ಸೀರೆ ತರಿಸಿ ಇಲ್ಲಿನ ಮಹಿಳೆಯರಿಗೆ ಬಾಗಿನ ನೀಡುತ್ತಿದ್ದಾರೆ. ಅವರು ಇದನ್ನು ಕೊಡುವ ಉದ್ದೇಶ ಒಳ್ಳೆಯದ್ದು, ಆದರೆ ಹೊರ ರಾಜ್ಯದ ಸೀರೆಯ ಬದಲಾಗಿ ಬಡ, ಮಧ್ಯಮ ವರ್ಗದ ನೇಕಾರರ ಸೀರೆಗಳನ್ನು ಖರೀದಿಸಿ ನೀಡುವುದರಿಂದ ಈ ಭಾಗದ ನೇಕಾರರಿಗೂ ಅನುಕೂಲವಾಗುತ್ತದೆ ಎಂದು ಕನ್ನಡ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಪಿ ಆಂಜನೇಯ ಆಗ್ರಹಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ನೇಕಾರರ ಸಮಸ್ಯೆಗಳ ಬಗ್ಗೆ ಕನ್ನಡಪಕ್ಷದಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಫೆಬ್ರವರಿ ತಿಂಗಳಲ್ಲಿ ಕೊಂಗಾಡಿಯಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ದೊಡ್ಡಬಳ್ಳಾಪುರ ಶಾಸಕರು ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ೩ ದಿನಗಳ ಸೀರೆ ಸಂತೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ವೇಳೆ ನೇಕಾರರ ಸಮಸ್ಯೆಗಳ ಪರಿಹರಿಸಲು ಸದಾ ಜತೆಯಾಗಿರುವ ಬಗ್ಗೆ ಹೇಳಿದ್ದರು. ಆದರೆ ಈಗ ಶಾಸಕರು ತಾಲೂಕಿನಲ್ಲಿ ಸುಮಾರು 75 ಸಾವಿರದಷ್ಟು ಹೊರರಾಜ್ಯದ ಸೀರೆಗಳನ್ನು ಈ ಕ್ಷೇತ್ರದ ಮಹಿಳೆಯರಿಗೆ ಬಾಗಿಗೆ ನೀಡುತ್ತಿದ್ದಾರೆ. ಆದರೆ ಇಲ್ಲಿನ ನೇಕಾರರ ಸೀರೆಗಳನ್ನು ಖರೀದಿ ಮಾಡಿ ಬಾಗಿನ ನೀಡಿದ್ದರೆ.ಸಂಕಷ್ಟದಲ್ಲಿರುವ ನೇಕಾರರಿಗೆ ಸಾಕಷ್ಟು ಅನುಕೂಲವಾಗುತ್ತದೆ ಅಲ್ಲವೇ ಎಂದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ, ನಾನಾ ಸಂದರ್ಭದಲ್ಲಿ ಶಾಸಕರು, ಮಾಜಿ ಶಾಸಕರು, ಮುಖಂಡರು ಮಹಿಳೆಯರಿಗೆ ಸೀರೆಗಳನ್ನು ಬಾಗಿನ ರೂಪದಲ್ಲಿ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯ ನೇಕಾರರ ಸೀರೆಗಳನ್ನು ಖರೀದಿಸಿ ನೀಡಿದರೆ, ಸೀರೆಗಳು ಉತ್ತಮ ಗುಣಮಟ್ಟದಲ್ಲಿ ಇರುವ ಜತೆಗೆ ನೇಕಾರರಿಗೂ ಆರ್ಥಿಕವಾಗಿ ನೆರವಾಗುತ್ತದೆ. ಈಗಾಗಲೇ ಹೊರರಾಜ್ಯಗಳ ಸೀರೆಗಳ ಪೈಪೋಟಿ, ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ನೇಕಾರರು ಸಂಕಷ್ಟದಲ್ಲಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು, ಸರ್ಕಾರ ನೇಕಾರರ ಪರ ನಿಂತು ಅವರ ಸೀರೆಗಳನ್ನು ಖರೀದಿಸುವ ಕೆಲಸ ಮಾಡಬೇಕು ಎಂದರು.
ಈ ವೇಳೆ ಕನ್ನಡಪಕ್ಷ ಜಿಲ್ಲಾ ಕಾರ್ಯದರ್ಶಿ ಮುನಿಶಾಮಪ್ಪ, ಕನ್ನಡಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಬೋರೇಗೌಡ, ರಂಗಣ್ಣ, ಪರಮೇಶ್, ಮುನಿರಾಜು, ಮಹೇಶ್, ಮೂರ್ತಿ, ಸುಬ್ಬಣ್ಣ, ರಾಜು ಸೇರಿದಂತೆ ಅನೇಕರು ಹಾಜರಿದ್ದರು.
