ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮರಾಗಬೇಕು ಅಲ್ಲದೆ ಕನ್ನಡಿಗರ ಅಸ್ತಿತ್ವ, ಕನ್ನಡಿಗರ ಆಸ್ಮಿತೆ, ನಾಡು ನುಡಿ ಜಲ ಭಾಷೆ ಗಡಿ ವಿಷಯಕ್ಕೆ ಧಕ್ಕೆ ಉಂಟಾದಲ್ಲಿ ನಾಡಿನ ಪರವಾಗಿ ನಿಲ್ಲುವ ಸಂಘಟನೆ ನಮ್ಮ ಕನ್ನಡ ಜಾಗೃತಿ ವೇದಿಕೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್ ತಿಳಿಸಿದರು

ಐತಿಹಾಸಿಕ ಪ್ರಸಿದ್ದಿ ಪಡೆದಿರುವ ನಂದಿ ಬೆಟ್ಟದಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ವತಿಯಿಂದ ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಸಂಘಟನೆಯು ಸುಮಾರು 33 ವರ್ಷಗಳಿಂದ ಕನ್ನಡ ನಾಡು ನುಡಿ ಜಲ ಭಾಷೆ ಗಡಿ ವಿಷಯವಾಗಿ, ಹಾಗೂ ಮಹಿಳೆಯರ, ದಲಿತರ,ರೈತರ ಪರವಾಗಿ ಸಾಮಾಜಿಕವಾಗಿ ಹೋರಾಟ ಮಾಡುತ್ತಿದ್ದು ನಿಸ್ವಾರ್ಥ ಸೇವೆ ಸಲ್ಲಿಸಿದ್ದೇವೆ ಎಂಬ ಹೆಮ್ಮೆ ಇದೆ.ಇನ್ನು ಮುಂದೆ ನಮ್ಮ ಹೋರಾಟ ಕನ್ನಡಿಗರನ್ನು ಲೆಕ್ಕಿಸದೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡದ ಖಾಸಗಿ ಕಂಪನಿಗಳ ವಿರುದ್ಧ, ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ವಿರುದ್ಧ ನಡೆಯಲಿದೆ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್ ಮಾತನಾಡಿ ಇಂದಿನ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ 15 ಕ್ಕೂ ಹೆಚ್ಚು ಜಿಲ್ಲೆಗಳಿಂದ ಪದಾಧಿಕಾರಿಗಳು ಭಾಗವಹಿಸಿದ್ದು. ನಮ್ಮೆಲ್ಲರ ಆಶಯ ಒಂದೇಯಾಗಿದ್ದು ನಾವೆಲ್ಲರೂ ಒಗ್ಗಟ್ಟಿನಿಂದ ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಇಂತಹ ಕಾರ್ಯಾಗಾರಗಳು ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯಬೇಕಿದೆ. ನಮ್ಮ ಸ್ವಚ್ಛ ಉದ್ದೇಶ ಹಾಗೂ ನಿಲುವು ನಮ್ಮ ಇಂತಹ ಕಾರ್ಯಾಗಾರಗಳಲ್ಲಿ ಗಟ್ಟಿಗೊಳ್ಳಲಿವೆ ಎಂದರು.
ನಂತರ ಮಾತನಾಡಿದ ಕಾನೂನು ಸಲಹೆಗಾರರಾದ ಡಾ.ಎಚ್ ಎಮ್ ವೆಂಕಟೇಶಮೂರ್ತಿ ರವರು ಸಂಘಟನೆಯ ಹೋರಾಟ, ಪ್ರತಿಭಟನೆ, ಚಳುವಳಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನಕ್ಕೆ ಧಕ್ಕೆ ಆಗದ ರೀತಿಯಲ್ಲಿ ರೂಪಿಸುವುದು ಬಹಳ ಮುಖ್ಯವಾಗಿದ್ದು .ನಮ್ಮ ಹೋರಾಟ ಸಾರ್ವಜನಿಕರಿಗೆ ಎಂದಿಗೂ ತೊಂದರೆ ಉಂಟುಮಾಡಬಾರದು ಅಲ್ಲದೆ ತುರ್ತು ಸಂದರ್ಭಗಳಲ್ಲಿ ಜನರ ಅನುಕೂಲಕ್ಕಾಗಿ ಸರ್ಕಾರ ನೀಡಿರುವ ಕೆಲವು ಸಹಾಯವಾಣಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಮ್ಮಿಂದಾಗಬೇಕಿದೆ ಈ ಕುರಿತು ವಿಶೇಷ ಕಾರ್ಯಕ್ರಮ ರೂಪಿಸುವುದು ಉತ್ತಮ ಎಂದರು.
ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರು ಮತ್ತು ತಾಲೂಕ ಅಧ್ಯಕ್ಷರುಗಳಿಗೆ ಆದೇಶ ಪತ್ರ ಮತ್ತು ಗುರುತಿನ ಚೀಟಿಯನ್ನು ನೀಡಲಾಯಿತು
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಂ ನಾಗರಾಜು ಮಾತನಾಡಿ ಸಮಾಜದಲ್ಲಾಗುವ ತಪ್ಪುಗಳನ್ನು ಕಾನೂನು ಚೌಕಟ್ಟಿನಡಿಯಲ್ಲಿ ಹೋರಾಟಗಳ ಮೂಲಕ ಸರಿಪಡಿಸಿ ಸಮಾಜಕ್ಕೆ ನಾವೆಲ್ಲರೂ ಮಾದರಿಯಾಗಬೇಕು ಜೊತೆಗೆ ನಿಷ್ಠಾವಂತ ಸದಸ್ಯರನ್ನು ವೇದಿಕೆಗೆ ಕರೆತರುವ ಮೂಲಕ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಜವಾಬ್ದಾರಿಯುತ ಪದಾಧಿಕಾರಿಗಳು ಶ್ರಮಿಸಬೇಕಿದೆ ಸಂಘಟನೆಯ ಪ್ರತಿಯೊಬ್ಬ ಸದಸ್ಯರು ತಮ್ಮ ಕನ್ನಡ ಸೇವೆಯ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕೆಂದು ತಿಳಿಸಿದರು.

ಈ ವೇಳೆ ಕನ್ನಡ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ್, ಪ್ರಧಾನ ಕಾರ್ಯದರ್ಶಿಗಳಾದ ಕವಿತಾ ಪೇಟೆ ಮಠ, ಮಹಿಳಾ ಉಪಾಧ್ಯಕ್ಷ ಮಹಿಳಾ ರಾಜ್ಯಾಧ್ಯಕ್ಷರಾದ ವತ್ಸಲ, ಕಾರ್ಯಾಧ್ಯಕ್ಷರಾದ ಸುಮಾಲಿನಿ ರಾಮಾಚಾರಿ, ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್,ಕಾನೂನು ಸಲಹೆಗಾರರಾದ ವೆಂಕಟೇಶ್ ಮೂರ್ತಿ, ಲಕ್ಷ್ಮಿ ಬೆಟಗೇರಿ, ಸಾಮಾಜಿಕ ಚಿಂತಕರಾದ ಪುನೀತ್, ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಜರಿದ್ದರು.
