ದೊಡ್ಡಬಳ್ಳಾಪುರ : ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶ್ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು, ಬಿಜೆಪಿಯಿಂದ ವೆಂಕಟೇಶ್ (ಬಂತಿ) ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಚುನಾವಣಾಧಿಕಾರಿ ಟಿ.ಆರ್ ಮಂಜುನಾಥ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು.
ಈ ವೇಳೆ ಶಾಸಕ ಧೀರಜ್ ಮುನಿರಾಜು ಮಾತನಾಡಿ ಎನ್.ಡಿ.ಎ ಮೈತ್ರಿಯಂತೆ ಮುಂದಿನ ದಿನಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗುವುದು. ನಮ್ಮ ಪಕ್ಷದ ಸದಸ್ಯರು ಇಂದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರದ ಮೂಲಭೂತಸೌಕರ್ಯಗಳು ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗೆಹರಿಸಲು ಶ್ರಮಿಸಲಿ ಎಂದರು.
ನೂತನ ಉಪಾಧ್ಯಕ್ಷ ಬಂತಿ ವೆಂಕಟೇಶ್ ಮಾತನಾಡಿ ನಗರಸಭೆಯ ಸದಸ್ಯರು ಸರ್ವಾನುಮತದಿಂದ ನನ್ನನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಲೋಕಸಭಾ ಸದಸ್ಯರಾದ ಡಾ. ಕೆ ಸುಧಾಕರ್ ರವರು ಹಾಗೂ ತಾಲೂಕಿನ ಹೆಮ್ಮೆಯ ಶಾಸಕರಾದ ಧೀರಜ್ ಮುನಿರಾಜು,ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಗೌಡರ ಬೆಂಬಲದೊಂದಿಗೆ ಅಭ್ಯರ್ಥಿಯಾಗಿದ್ದು ಪಕ್ಷದ ಎಲ್ಲಾ ಪ್ರಮುಖರ ಸಹಕಾರದೊಂದಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ.ನನ್ನ ಮೇಲೆ ಸರ್ವ ಪಕ್ಷದ ಸದಸ್ಯರು ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸವನ್ನು ಖಂಡಿತವಾಗಿಯೂ ಉಳಿಸಿಕೊಳ್ಳುತ್ತೇನೆ. ಇರುವ ಅಲ್ಪಾವಧಿಯಲ್ಲಿ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ನಗರದ ಮೂಲಭೂತ ಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶ್ರಮಿಸಲಾಗುವುದು ಎಂದರು.
ನೂತನ ಉಪಾಧ್ಯಕ್ಷರನ್ನು ನಗರಸಭೆ ಪೌರಯುಕ್ತ ಕಾರ್ತಿಕೇಶ್ವರ್ ,ನಗರಸಭೆ ಅಧ್ಯಕ್ಷರಾದ ಸುಮಿತ್ರಾ ಆನಂದ್, ಎಲ್ಲಾ ವಾರ್ಡಿನ ಸದಸ್ಯರು ,ಬಾಶೆಟ್ಟಿ ಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರೇಮ್ಬಿ ಕುಮಾರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮುದ್ದಪ್ಪ , ಬಿಜೆಪಿ ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪ್ರಮುಖರು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಗೌಡ ಸೇರಿದಂತೆ ಹಲವು ಪ್ರಮುಖರು ಅಭಿನಂದಿಸಿದರು.
