ದೊಡ್ಡಬಳ್ಳಾಪುರ :ಶ್ರೀ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ವತಿಯಿಂದ ಜೂನ್ 27ರಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶ್ರೀ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಟಿ.ವಿ.ಲಕ್ಷ್ಮಿ ನಾರಾಯಣ್ ತಿಳಿಸಿದರು.
ನಗರದ ಪಿಎಲ್ ಡಿ ಬ್ಯಾಂಕ್ ಆವರಣದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ನಾಡಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಜನದ್ವಿಖ್ಯಾತ ಬೆಂಗಳೂರು ನಗರವನ್ನು ನಿರ್ಮಿಸಿ, ಎಲ್ಲಾ ಜಾತಿ ಪಂಗಡದವರನ್ನು ಸಮಾನವಾಗಿ ಕಂಡಿದ್ದಾರೆ. ಅವರ ಜಯಂತಿ ಆಚರಿಸುವ ಮೂಲಕ ಅವರ ಸಾಧನೆಗಳನ್ನು ಸ್ಮರಿಸುವ ಕಾರ್ಯಲ ಮಾಡಲಾಗುತ್ತಿದೆ ಎಂದರು.
ಅದ್ಧೂರಿ ಮೆರವಣಿಗೆ:
ಜೂನ್ 27ರಂದು ಬೆಳಿಗ್ಗೆ 9-30ಗಂಟೆಗೆ ನಗರದ ಶ್ರೀ ನೆಲದಾಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಕೆಂಪೇಗೌಡರ ಪ್ರತಿಮೆಯ ಭವ್ಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಮೆರವಣಿಗೆಯಲ್ಲಿ ಹೆಸರಾಂತ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಯಲಿರುವ ಕೆಂಪೇಗೌಡರ ಜಯಂತಿ ಕಾರ್ಯ1ಕ್ರಮದಲ್ಲಿ ಭಾಗವಹಿಸಿ, ನಂತರ ಬೆಳಿಗ್ಗೆ 11.30 ಗಂಟೆಗೆ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀ ಕೆಂಪೇಗೌಡರ ಆದ್ಧೂರಿ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು. ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕರಾದ ಕೃಷ್ಣಪ್ಪ, ಟಿ.ವೆಂಕಟರಮಣಯ್ಯ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಸಿ.ಶಿವಕುಮಾರ್ ಮಾತನಾಡಿ ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ ಅವರು ಸರ್ವ ಸಮುದಾಯಗಳ ಅಭಿವೃದ್ಧಿಗಾಗಿ ಬೆಂಗಳೂರಿನಂತಹ ಮಹಾ ನಗರವನ್ನು ಕಟ್ಟಿದವರು, ಈ ಕಾರ್ಯಕ್ರಮ ಕೇವಲ ಒಂದು ಸಮುದಾಯದ ಕಾರ್ಯಕ್ರಮವಲ್ಲ, ಈ ಕಾರ್ಯಕ್ರಮದಲ್ಲಿ ಪಕ್ಷತೀತವಾಗಿ, ಜಾತ್ಯಾತೀತವಾಗಿ ಎಲ್ಲಾ ನಾಯಕರು, ಪ್ರಮುಖರು ಒಮ್ಮನಸ್ಸಿನಿಂದ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಶ್ವತ್ಥನಾರಾಯಣ ಗೌಡ, ಶಶಿಧರ್ , ಜಯರಾಂ, ರಾಜಣ್ಣ, ಮನು, ನಾಗೇಶ್, ವಿಶ್ವಾಸ್ ಮೊದಲಾದವರು ಹಾಜರಿದ್ದರು.
