ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ. ವಾಸುದೇವ್ ಹಾಗೂ ಉಪಾಧ್ಯಕ್ಷರಾಗಿ ಸತ್ಯನಾರಾಯಣ ಸ್ವಾಮಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು ಮತ್ತು ಮುಖಂಡರು ಅಭಿನಂದಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಟಿ.ಜಿ. ವಾಸುದೇವ್, ‘ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘದ ಸದಸ್ಯರು ಹಾಗೂ ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತೇನೆ. ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಬಲಪಡಿಸಿ, ಸದಸ್ಯರಿಗೆ ಉತ್ತಮ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು’ ಎಂದರು.
‘ಸಹಕಾರ ಸಂಘವು ರೈತರೊಂದಿಗೆ ನೇರ ಸಂಪರ್ಕ ಹೊಂದಿರುವ ಸಂಸ್ಥೆಯಾಗಿದ್ದು, ರೈತರಿಗೆ ಅಗತ್ಯವಿರುವ ಸೇವೆಗಳು ಪರಿಣಾಮಕಾರಿಯಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು. ಸಂಘದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಪಡೆದು ಪಾರದರ್ಶಕವಾಗಿ ಆಡಳಿತ ನಡೆಸಲಾಗುವುದು’ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ತೆಂಗು ನಾರು ಮಂಡಳಿ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು, ಸುರೇಶ್ ಬಾಬು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರತಾಪ್, ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಟಿಎಪಿಎಂಸಿ ನಿರ್ದೇಶಕ ಪುರುಷೋತ್ತಮ್, ಮುಖಂಡರಾದ ಧನುಂಜಯ, ಮಂಜುನಾಥ, ಮುನೇಗೌಡ, ಅಶೋಕ್, ಹರೀಶ್, ಗಂಗಾಧರ, ಕನಕದಾಸ ಯುವ ಮುಖಂಡ ಉದಯ ಆರಾಧ್ಯ, ಮುರುಳಿ ಹಾಗೂ ನೂತನ ನಿರ್ದೇಶಕರು ಸದಸ್ಯರು ಹಾಜರಿದ್ದರು.
