
ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ನಾಮಫಲಕಗಳ ವಿಚಾರವಾಗಿ ಆದೇಶ ಹೊರಡಿಸಿದೆ ಆದರೆ ಇಲ್ಲಿಯವರೆಗೂ ಕೆಲ ವಾಣಿಜ್ಯೋದ್ಯಮಿಗಳು ನಿಯಮ ಉಲ್ಲಂಘನೆ ಮಾಡಿ ವಾಣಿಜ್ಯ ಸ್ಥಳಗಳಲ್ಲಿ ಕನ್ನಡೇತರ ನಾಮಫಲಕಗಳ ಬಳಕೆ ಮಾಡುತ್ತಿದ್ದಾರೆ ಇಂತಹ ಕನ್ನಡೇತರ ನಾಮಫಲಕ ಕೂಡಲೇ ತೆರವುಗೊಳಿಸಬೇಕು ಎಂದು ಕನ್ನಡಪರ ಹೋರಾಟಗಾರ ಸಂಜೀವ್ ನಾಯಕ್ ಒತ್ತಾಯಿಸಿದರು.
ಕನ್ನಡ ಸಂಘಟನೆಗಳ ಒಕ್ಕೂಟ (ದೊಡ್ಡಬಳ್ಳಾಪುರ )ತಾಲ್ಲೂಕು ವತಿಯಿಂದ ಕರೆಯಲಾಗಿದ್ದ ಕನ್ನಡೇತರ ನಾಮಫಲಕ ತೆರವು ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಡಿಸೆಂಬರ್ 07 ರಂದು ಸ್ಥಳೀಯ ನಗರಸಭಾ, ಪೊಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ನಾವು ಮಾಡುವ ಹೋರಾಟ ಸದಾ ನಿರಂತರವಾಗಿದೆ ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಈ ಬಾರಿ ನಮ್ಮ ಹೋರಾಟ ಫಲ ನೀಡಲೆ ಬೇಕು ಕನ್ನಡ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಒಂದಾಗೋಣ ಎಂದರು.
ಅಧಿಕಾರಿಗಳು ಸಭೆ ಕರೆಯಲಿ
ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯವನ್ನು ಡಿಸೆಂಬರ್ 07 ರಂದು ನಿರ್ಧರಿಸಿದ್ದು, ತಾಲ್ಲೂಕುದಂಡಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹಾಗೂ ಕನ್ನಡ ಪರ ಸಂಘಟನೆಗಳ ಸಭೆ ಕರೆದು ಕನ್ನಡೇತರ ನಾಮಫಲಕಗಳ ತೆರವು ಕಾರ್ಯಾಚರಣೆ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಿ ಇಲ್ಲವೇ ಡಿ. 07 ರಂದು ತಾಲೂಕಿನಾದ್ಯಂತ ಇರುವ ಕನ್ನಡೇತರ ನಾಮಫಲಕಗಳನ್ನು ಕನ್ನಡ ಪರ ಸಂಘಟನೆಯ ಹೋರಾಟಗಾರರು ತೆರವುಗೊಳಿಸಲು ಮುಂದಾಗಲಿದ್ದೇವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕನ್ನಡಪರ ಹೋರಾಟಗಾರರು ತಿಳಿಸಿದರು.
ಮೊದಲು ನಗರಸಭೆ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಎಲ್ಲಾ ಇಲಾಖೆ ಅಧಿಕಾರ ಸಭೆ ನಡೆಸುವಂತೆ ತಿಳಿಸೋಣ ಅಧಿಕಾರಿಗಳು ಸ್ಪಂದಿಸದೆ ಇದ್ದ ಪಕ್ಷದಲ್ಲಿ ಸುದ್ದಿಗೋಷ್ಠಿ ಮಾಡುವ ಮೂಲಕ ನಮ್ಮ ಹೋರಾಟ ಪ್ರಾರಂಭಿಸೋಣ, ಪ್ರತಿ ಮುಂಜಾನೆ ಸಾರ್ವಜನಿಕರ ಮನೆಬಾಗಿಲಿಗೆ ಹೋಗುವ ನಗರಸಭೆ ಕಸದ ಗಾಡಿಗಳ ಮೂಲಕ, ಇತರೆ ಮಾಧ್ಯಮಗಳನ್ನು ಬಳಸಿ ಕೊಂಡು ಕನ್ನಡೇತರ ನಾಮಫಲಕ ತೆರವು ಮಾಡುವಂತೆ ಮಾಹಿತಿ ರವಾನೆ ಮಾಡಿ ಅಂತಹ ನಾಮಫಲಕಗಳನ್ನು ತೆರವುಗೊಳಿಸಲು ಅಂತಿಮ ದಿನಾಂಕ ನಿಗದಿ ಮಾಡಿ ಅಧಿಕಾರಿಗಳ ಸಹಯೋಗದಲ್ಲಿ ಈ ಕಾರ್ಯಕ್ಕೆ ಮುಂದಾಗುವುದು ಉತ್ತಮ ಎಂದು ಕನ್ನಡಪರ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಮುಖಂಡರಾದ ತ ನಾ ಪ್ರಭುದೇವ್, ರಾಜಘಟ್ಟ ರವಿ,ಜಿ. ಸುರೇಶ್, ಗೋವಿಂದರಾಜು, ಡಿ ಪಿ ಆಂಜನೇಯ, ಜೋಗಹಳ್ಳಿ ಅಮ್ಮು, ಜೆ. ಶಿವಕುಮಾರ್, ಅಗ್ನಿ ವೆಂಕಟೇಶ್,ಮುನಿಪಾಪಯ್ಯ, ಅನ್ನದಾಸೋಹಿ ಮಲ್ಲೇಶ್, ಹಮಾಮ್ ವೆಂಕಟೇಶ್, ವೇಣು, ರಮೇಶ್, ವೆಂಕಟೇಶ್, ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಹಾಜರಿದ್ದರು.




