ದೊಡ್ಡಬಳ್ಳಾಪುರ : ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಗಳ ಪೆರೇಡ್ ನಡೆಸಿದ ಪೊಲೀಸರು, ರೌಡಿಶೀಟರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಇನ್ಸೆಕ್ಟರ್ ನವೀನ್ ಕುಮಾರ್ ಎಂ.ಬಿ ಅವರು ಮಿಟ್ಟೆ ಗ್ಯಾಂಗ್ ಸದಸ್ಯರಿಗೆ ಕಾನೂನುಬದ್ಧವಾಗಿ ವರ್ತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರೌಡಿಯಿಸಂ ಜೀವನವನ್ನು ಹಾಳು ಮಾಡುವುದಲ್ಲದೆ ಜೀವನ ಪರ್ಯಂತ ರೌಡಿಶೀಟರ್ ಪಟ್ಟ ಕಟ್ಟಿಕೊಂಡು ಬದುಕಬೇಕಾಗುತ್ತದೆ. ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬೇಕು. ಎಲ್ಲಾರು ಕಾನೂನನ್ನು ಗೌರವಿಸಬೇಕು. ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು ಹೀಗೆ ಮುಂದುವರೆದರೆ ಗಡಿಪಾರು ಮಾಡಲಾಗುವುದು. ಹತ್ತು ಇಪ್ಪತ್ತು ವರ್ಷಗಳಾದರೂ ರೌಡಿಶೀಟರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಬಿಗಿಯಾಗಿದೆ. ಕುಟುಂಬಸ್ಥರು ಗೌರವ ನೀಡುವಷ್ಟು ರೀತಿಯಲ್ಲಿ ಯಾದರೂ ಜೀವನ ಮಾಡಿ. ಪೊಲೀಸರಿಗೆ ತಿಳಿಯದಂತೆ ಸ್ಥಳ, ಫೋನ್ ನಂಬರ್ ಬದಲಾವಣೆ ಮಾಡಬಾರದು. ಕಾನೂನಿಗೆ ಬೆಲೆ ಕೊಟ್ಟು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿ. ಮಾದರಿ ಜೀವನ ನಡೆಸಿದರೆ ರೌಡಿ ಶೀಟರ್ ಬಂದ್ ಮಾಡಲಾಗುವುದು ಎಂದರು.
ರೌಡಿಗಳಿಗೆ ಸಂಬಂಧಿಸಿದ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ವಾಹನ ದಾಖಲೆಗಳು ಸೇರಿದಂತೆ ಇತರೆ ದಾಖಲಾತಿಗಳನ್ನು ಸಂಗ್ರಹಿಸಬೇಕು. ಸದಾ ರೌಡಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿರಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
