ದೊಡ್ಡಬಳ್ಳಾಪುರ: ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಿಂದ ದುರ್ವಾಸನೆ ಹೊರಹೊಮ್ಮುತ್ತಿದ್ದು ಸ್ಥಳೀಯ ವರದನಹಳ್ಳಿ ಗ್ರಾಮಸ್ಥರು ದುರ್ವಾಸನೆಯಿಂದ ಮುಕ್ತಿ ಪಡೆಯಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಮುಖಂಡರಾದ ನಂಜೇಶ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಅವರು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸೀಡೆಕೋಸಾ ಕಂಪನಿಯು ಸತ್ತಿರುವ ರೇಷ್ಮೆ ಹುಳು ಹಾಗೂ ಇನ್ನಿತರ ವಸ್ತುಗಳಿಂದ ಕೆಮಿಕಲ್ ತಯಾರು ಮಾಡುವ ಕಂಪನಿಯಾಗಿದ್ದು ಕಂಪನಿಯಿಂದ ಬರುವ ದುರ್ವಾಸನೆ ತಡೆಗಟ್ಟಲು ಯಾವುದೇ ರೀತಿಯ ಕ್ರಮಗಳನ್ನು ತಗೆದುಕೊಳ್ಳದೇ ಕಾರ್ಯಮಾಡಿಸುತ್ತಿದ್ದು ಇದರಿಂದ ಸ್ಥಳೀಯರು ವಾಸನೆಗೆ ತತ್ತರಿಸುವ ಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಈ ವಿಷಯವಾಗಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೂ ಅಧಿಕಾರಿಗಳು ಬಾರದೇ ತನಿಖೆ ಮಾಡಲೆಂದು ಸ್ಥಳಕ್ಕೆ ಪೌರಕಾರ್ಮಿಕರನ್ನ ಕಳಿಸಿದ್ದು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಸ್ಥಳೀಯರ ಒತ್ತಾಯದ ಮೇರೆಗೆ ಘಟನಾ ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ವಿಶಾಲಾಕ್ಷಿಯವರು ಭೇಟಿ ನೀಡಿದ್ದು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ನಮಗೆ ಕಾರ್ಖಾನೆಯ ದುರ್ವಸನೆಯಿಂದ ಮುಕ್ತಿದೊರೆತರೆ ಸಾಕು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಬಗೆಹಸಬೇಕಿದೆ ಸಮಸ್ಯೆ ಬಗೆಹರಿಸದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿ ಕೌನ್ಸಿಲರ್ ರಾಮಮೂರ್ತಿ, ಅಕ್ಷಯ್, ನಂಜೇಶ್, ಮಹೇಶ್ ಸೇರಿದಂತೆ ವರದನಹಳ್ಳಿ ಗ್ರಾಮಸ್ಥರು ಹಾಜರಿದ್ದರು.
