ಬೆಂಗಳೂರು ಗ್ರಾಮಾಂತರ : ಕರ್ನಾಟಕ ರಾಜ್ಯ ಸರ್ಕಾರವು ಕನಿಷ್ಠ ವೇತನವನ್ನು ಪರಿಷ್ಕರಿಸಿ ಪ್ರತಿ ಉದ್ದಿಮೆಗೆ ಪ್ರತ್ಯೇಕವಾಗಿ ಕನಿಷ್ಠ ವೇತನ ನಿಗದಿ ಮಾಡದೆ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ ನಾಲ್ಕು ವಲಯಕ್ಕೆ ಬದಲಾಗಿ ಮೂರು ವಲಯಗಳಾಗಿ ಮಾಡಿ ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸಿಐಟಿಯು ಸ್ವಾಗತಿಸುತ್ತದೆ. ಆದರೆ ಈ ಅಧಿಸೂಚನೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಬೇಕೆಂದು ಸಿಐಟಿಯು ಆಗ್ರಹಿಸುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ ಎ ವೆಂಕಟೇಶ್ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ಪ್ರಸ್ತುತ ಬೆಲೆಗಳು ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ ಸರಾಸರಿ 36,000 ಕನಿಷ್ಠ ವೇತನ ನಿಗದಿ ಮಾಡಬೇಕು. ಬಹು ಸಂಖ್ಯಾತ ಕಾರ್ಮಿಕರಿಗೆ ಒಂದು ವರ್ಷದ ಅರಿಯರ್ಸ್ ಸಿಗದಂತೆ ಮಾಡಿದೆ, ಹಾಗಾಗಿ ಕನಿಷ್ಠ ವೇತನವನ್ನು ಏಪ್ರಿಲ್ 2025 ರಿಂದಲೇ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕೆಂದು ಸಿಐಟಿಯು ಒತ್ತಾಯಿಸುತ್ತದೆ ಎಂದರು
ಈ ಅಧಿಸೂಚನೆಯಿಂದ ಗಾರ್ಮೆಂಟ್ಸ್, ಪ್ಲಾಂಟೇಶನ್, ಬೀಡಿ,ಅಗರಬತ್ತಿ, ಕೈಮಗ್ಗ ಸೇರಿ 19 ವಿಭಾಗದ ಉದ್ಯಮಗಳನ್ನು ಹೊರಗಿಟ್ಟಿರುವ ರಾಜ್ಯ ಸರ್ಕಾರದ ಕ್ರಮದಿಂದ ಬಹು ಸಂಖ್ಯಾತ ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳದಿಂದ ವಂಚಿತರಾಗಲಿದ್ದಾರೆ, ಪ್ರಸ್ತುತ ಮೇ 22ರಂದು ಜಾರಿಗೆ ತಂದಿರುವ ಕನಿಷ್ಠ ವೇತನವನ್ನು ಈ 19 ಉದ್ದಿಮೆಗಳಿಗೂ ವಿಸ್ತರಿಸಿ ಕೂಡಲೇ ಅಧಿಸೂಚನೆ ಹೊರಡಿಸಬೇಕು ಸ್ಕೀಮ್ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು ಎಂದರು.
ಕನಿಷ್ಠವೇತನದ ಜೊತೆಗೆ 4 ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರ ಪರ ಕರ್ನಾಟಕ ತಿದ್ದುಪಡಿಗಳನ್ನು ಮಾಡಿ ನಿಯಮಗಳನ್ನು ರೂಪಿಸಲು ಹಾಗೂ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಖಾಯಂಯೇತರರ ಖಾಯಂಗೆ ಶಾಸನ ರೂಪಿಸಲು ಒತ್ತಾಯಿಸಿ ಮೇ 30ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ನೂರಾರು ಕಾರ್ಮಿಕರಿಂದ ಪ್ರತಿಭಟನೆ ನಡೆಸಿ, ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
