ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರಮಿಕ ವರ್ಗದವರ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಶ್ರಮಿಕ ವಸತಿ ಶಾಲೆ ಸಹಕಾರಿಯಾಗಲಿದೆ ಎಂದು ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೆಗೌಡ ಅವರು ಅಭಿಪ್ರಾಯಪಟ್ಟರು.
ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿಶಾಲೆ ಕಟ್ಟಡ ಸಮುಚ್ಚಯದ ಶಂಕು ಸ್ಥಾಪನಾ ಕಾರ್ಯಕ್ರಮ ಹಾಗೂ ಅರ್ಹ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಸುರಕ್ಷತಾ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲೇ ಪ್ರಥಮವಾಗಿ ಗಿಗ್ ಕಾರ್ಮಿಕರ ರಕ್ಷಣೆಗಾಗಿ ನಮ್ಮ ರಾಜ್ಯ ಸರ್ಕಾರವು ಹೊಸ ಕಾನೂನು ಜಾರಿಗೆ ತಂದಿದೆ. ಜತೆಗೆ ಕಾರ್ಮಿಕರ ಕನಿಷ್ಠ ವೇತನವನ್ನು 60% ಏರಿಕೆ ಮಾಡಿ ಆದೇಶ ಮಾಡುವ ಮೂಲಕ ಕಾರ್ಮಿಕರಿಗೆ ವೇತನ ಭದ್ರತೆ ಒದಗಿಸಿದೆ ಎಂದರು.
10 ಎಕರೆ ಜಾಗದಲ್ಲಿ 35 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರಮಿಕ ವಸತಿ ಶಾಲೆ ಕಟ್ಟಡ ಸಮುಚ್ಚಯ ಕಾಮಗಾರಿಯು ಮುಂದಿನ 15 ತಿಂಗಳೊಳಗೆ ಪೂರ್ಣಗೊಂಡು ಶ್ರಮಿಕರ ಮಕ್ಕಳಿಗೆ ಜ್ಞಾನಾರ್ಜನೆ ಮಾಡಲು ನೆರವಾಗಲಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 32 ಸಾವಿರಕ್ಕೂ ಹೆಚ್ಚು ಅರ್ಹ ಕಾರ್ಮಿಕರಿಗೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯಧನ ಹಾಗೂ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿ ಕಾರ್ಯದರ್ಶಿ ಉಮೇಶ್ ಎ.ಹೆಚ್ ಅವರು ಮಾತನಾಡಿ, ಕಾರ್ಮಿಕರ ಮಕ್ಕಳಿಗೆ ಉತ್ಕೃಷ್ಟ ದರ್ಜೆಯ ಶಿಕ್ಷಣ ಸಿಗಬೇಕೆನ್ನುವ ಸದುದ್ದೇಶದಿಂದಾಗಿ ರಾಜ್ಯ ಸರ್ಕಾರವು ರಾಜ್ಯದ 31 ಜಿಲ್ಲೆಗಳಲ್ಲಿ ಶ್ರಮಿಕ ವಸತಿ ಶಾಲೆಗಳು ಸ್ಥಾಪಿಸುತ್ತಿದೆ. ಕಾರ್ಮಿಕ ಇಲಾಖೆಯು ಶ್ರಮಿಕರ ಹಾಗೂ ಅವರ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಅಪಘಾತ ಪರಿಹಾರ, ಶೈಕ್ಷಣಿಕ ಸಹಾಯ ಧನ, ಹೆರಿಗೆ ಭತ್ಯೆ, ಪಿಂಚಣಿ ಸೇರಿದಂತೆ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇಲಾಖೆಯಿಂದ ಕಾರ್ಮಿಕರಿಗೆ ಮದುವೆ ಸಹಾಯ ಧನವಾಗಿ 60 ಸಾವಿರ, ಅನುಗ್ರಹ ರಾಶಿ ಯೋಜನೆಯಡಿ ಅಂತಿಮ ಸಂಸ್ಕಾರಕ್ಕೆ 1.50 ಲಕ್ಷ ಸಹಾಯಧನ, ಸುರಕ್ಷತಾ ಕಿಟ್, ತ್ರಿಚಕ್ರ ವಾಹನ ವಿತರಣೆ ಸೇರಿದಂತೆ ಇಲಾಖೆ ಸೌಲಭ್ಯ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಸತೀಶ್ ಗೌಡ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಚ್ಚೆಗೌಡ, ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾದ ಶ್ರೀಯಾನ್ಸ್ ಕುಮಾರ್ ಜೈನ್, ಹೆಚ್.ಜಿ ರಮೇಶ್, ಜಾನಿ ಕೆ.ಪಿ, ಜಯಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿಯಾದ ಮುಕ್ಕುಂದ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
