ದೊಡ್ಡಬಳ್ಳಾಪುರ : ಸಮಾಜದಲ್ಲಿ ದಲಿತ ಸಮುದಾಯಗಳು ಎದುರಿಸುತ್ತಿದ್ದ ಸಮಸ್ಯೆ ಶೋಷಣೆಗಳ ವಿರುದ್ಧ ಪ್ರೊ. ಬಿ ಕೃಷ್ಣಪ್ಪ ಅವರ ಹೋರಾಟ ಎಲ್ಲರಿಗೂ ಮಾದರಿ. ದಲಿತ ಸಮುದಾಯಗಳ ಅಭಿವೃದ್ಧಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತನ್ನದೇ ಆದ ಸಾಕಷ್ಟು ಕೊಡುಗೆ ನೀಡಿದೆ ಎಂದು ಘಾಟಿ ಸುಬ್ರಹ್ಮಣ್ಯ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಆರ್ ವಿ ಮಹೇಶ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೊ. ಬಿ ಕೃಷ್ಣಪ್ಪ ರವರ ೮೯ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು ಅಂಬೇಡ್ಕರ್ ಚಿಂತನೆಗಳನ್ನು ಅನುಸರಿಸಿ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಪ್ರೊ ಬಿ ಕೃಷ್ಣಪ್ಪ ಅವರ ಜೀವನವೇ ನಮಗೆ ಆದರ್ಶ.ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂಬ ಬಗ್ಗೆ ಪ್ರತಿಪಾದನೆ ಮಾಡಿದ ಅವರು ಶಿಕ್ಷಣ, ಸಂಘಟನೆ, ಹೋರಾಟದ ಸಿದ್ದಾಂತದೊoದಿಗೆ ಸಾಕಷ್ಟು ಹೋರಾಟಗಳನ್ನು ನಡೆಸಿ, ದಲಿತ ಸಮುದಾಯದ ಶಕ್ತಿಯಾಗಿ ಶ್ರಮಿಸಿದರು ಇಂದು ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಾಮಮೂರ್ತಿ ಮಾತನಾಡಿ, ಪ್ರೊ.ಬಿ ಕೃಷ್ಣಪ್ಪ ಅವರು ಕರ್ನಾಟಕದ ಪ್ರಮುಖ ದಲಿತ ಚಳವಳಿಯ ಧೀಮಂತ ನಾಯಕರು, ಸಾಮಾಜಿಕ ಹೋರಾಟಗಾರರು ಮತ್ತು ಪ್ರಖರ ಸಾಹಿತಿಯಾಗಿದ್ದರು. ಇವರು ಕರ್ನಾಟಕದಲ್ಲಿ ದಲಿತರು, ದಮನಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಧ್ವನಿ ಎತ್ತಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿದರು. ಇವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರೇರಿತರಾಗಿ ೧೯೭೦ರ ದಶಕದಲ್ಲಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಬಿತ್ತಿದರು.ಶೋಷಿತ ಸಮುದಾಯಗಳಿಗೆ ಸಂವಿಧಾನಬದ್ಧ ಹಕ್ಕುಗಳನ್ನು ದೊರಕಿಸಿಕೊಡಲು ಶ್ರಮಿಸಿದರು.
ಅಸ್ಪೃಶ್ಯತೆ ಮತ್ತು ಜಾತೀಯತೆ ವಿರುದ್ಧ ಹೋರಾಡುತ್ತಾ, ಸಾಮಾಜಿಕ ನ್ಯಾಯಕ್ಕಾಗಿ ಧ್ವನಿಯೆತ್ತುವುದು ಈ ಸಂಘಟನೆಯ ಮೂಲ ಉದ್ದೇಶವಾಗಿದೆ ಈ ಸಮಿತಿಯನ್ನು ಪ್ರೊ. ಬಿ ಕೃಷ್ಣಪ್ಪರವರು 1975ರ ಜನವರಿ 25ರಂದು ಅಧಿಕೃತವಾಗಿ ನೋಂದಾಯಿಸುವ ಮೂಲಕ ದಲಿತ ಪರ ಧ್ವನಿಯಾಗಿ ಕಾರ್ಯ ನಿರ್ವಹಿಸಲು ಮುಂದಾಯಿತು ಅಂದಿನಿಂದ ದಲಿತರ ಮೇಲಿನ ದೌರ್ಜನ್ಯ ತಡೆ, ಭೂಮಿ ಹಕ್ಕು, ದಲಿತ ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ನ್ಯಾಯ ಒದಗಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು.

ಈ ವೇಳೆಯಲ್ಲಿ ಮುಖಂಡರಾದ ಆರ್ ವಿ ಶಿವಕುಮಾರ್, ಬೈಲಾಂಜಿನಮೂರ್ತಿ, ಶ್ರೀನಿವಾಸ ಎನ್, ಪೂಜರಂಗಯ್ಯ, ಮಾರಪ್ಪ, ಹನುಮಂತರಾಯಪ್ಪ, ಓಬಳೇಶ್, ಸುಬ್ಬು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ, ನಾಗರತ್ನಮ್ಮ, ಆಶಾ, ಪ್ರೇಮಾ, ವಿದ್ಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು
