ದೊಡ್ಡಬಳ್ಳಾಪುರ : ನಗರದ 9 ನೇ ವಾರ್ಡ್ ಚೈತನ್ಯ ನಗರದ ಮುಖ್ಯ ದ್ವಾರಕ್ಕೆ ಶ್ರೀ ದೇವರ ದಾಸಿಮಯ್ಯ ಹೆಬ್ಬಾಗಿಲು ಎಂದು ನಾಮಕರಣ ಮಾಡಿ ನೂತನ ಸ್ವಾಗತಕಮಾನು ಉದ್ಘಾಟನೆ ಮಾಡಲಾಯಿತು.

ಸುಮಾರು 4.80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಸ್ವಾಗತಕಮಾನನ್ನು ಶಾಸಕ ಧೀರಜ್ ಮುನಿರಾಜು, ಸ್ಥಳೀಯ ನಗರಸಭಾ ಸದಸ್ಯರ ಜೊತೆಗೂಡಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ನೇಕಾರಿಕೆ ಪ್ರಮುಖ ಉದ್ಯಮವಾಗಿದ್ದು, ಈ ಹಿಂದೆ ನಗರಸಭಾ ಅಧ್ಯಕ್ಷರಾಗಿದ್ದ ಸುಧಾರಾಣಿ ಲಕ್ಷ್ಮೀನಾರಾಯಣ ಅವರ ಸಮಯದಲ್ಲಿ ಈ ಶ್ರೀ ದೇವರ ದಾಸಿಮಯ್ಯ ಹೆಬ್ಬಾಗಿಲು ನಿರ್ಮಾಣದ ಕಾಮಗಾರಿ ಅನುಮೋದನೆ ಪಡೆದಿದ್ದು ಈಗ ಕಾಮಗಾರಿ ಪೂರ್ಣಗೊಂಡಿರುವ ಹಿನ್ನಲೆ ಸ್ಥಳೀಯ ಪ್ರಮುಖರ ಸಹಯೋಗದೊಂದಿಗೆ ಇಂದು ಈ ಸ್ವಾಗತಕಮಾನನ್ನು ಉದ್ಘಾಟಿಸಲಾಗಿದೆ ಎಂದರು.
ತಾಲೂಕಿನಲ್ಲಿ ನೈಕಾರಿಕ್ಕೆ ನಂಬಿ ಜೀವನ ಸಾಗಿಸುತ್ತಿರುವ ಎಲ್ಲಾ ನೇಕಾರರಿಗೆ ಈ ಸ್ವಾಗತ ಕಮಾನು ಅರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದೇವೆ. ಅತಿ ಹೆಚ್ಚು ನೇಕಾರರನ್ನು ಹೊಂದಿರುವ ನಗರದ ಚೈತನ್ಯನಗರದ ಹೆಬ್ಬಾಗಿಲಿಗೆ ದೇವರ ದಾಸಿಮಯ್ಯ ಹೆಸರಿಟ್ಟಿರುವುದು ಸಂತಸ ತಂದಿದೆ ಎಂದರು.

ಸ್ಥಳೀಯ ಮುಖಂಡರಾದ ಲಕ್ಷ್ಮೀನಾರಾಯಣ ಮಾತನಾಡಿ 11 ನೇ ಶತಮಾನದ ನಾಡಿನ ಶಿವ ಶರಣರರಲ್ಲಿ ದೇವರ ದಾಸಿಮಯ್ಯನವರು ಪ್ರಮುಖರು ಹಾಗೂ ಮಹಾಶಿವಶರಣರಲ್ಲಿ ಇವರೊಬ್ಬರು ಮತ್ತು ಶರಣ ಸಂಪ್ರದಾಯ ದಲ್ಲಿ ಮೊದಲಿಗರು ಹಾಗು ಆದ್ಯ ವಚನಕಾರ ಪಿತಾಮಹ, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ಇಂತಹ ಐತಿಹಾಸಿಕ ಪುರುಷರ ಹೆಸರನ್ನು ನಮ್ಮ ವಾರ್ಡಿನ ಹೆಬ್ಬಾಗಿಲಿಗೆ ನಾಮಕರಣ ಮಾಡಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.
ತಾಲೂಕಿನಲ್ಲಿ ಲಕ್ಷಾಂತರ ಕಾರ್ಮಿಕರು ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ ಅವರೆಲ್ಲರಿಗೂ ಗೌರವ ಸಮರ್ಪಣೆ ಈ ಮೂಲಕ ಮಾಡಿದ್ದೇವೆ.ತಾಲ್ಲೂಕಿನಲ್ಲಿ ಇಂದು ಮೊದಲ ದೇವರ ದಾಸಿಮಯ್ಯ ಹೆಬ್ಬಾಗಿಲು ಇಂತಹ ಐತಿಹಾಸಿಕ ನಿರ್ಣಯಕ್ಕೆ ಸಹಕರಿಸಿದ ತಾಲೂಕಿನ ಶಾಸಕರು ನಗರಸಭೆ ಸದಸ್ಯರು ಚೈತನ್ಯ ನಗರದ ಮುಖಂಡರು ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಸುಮಿತ್ರ ಆನಂದ್ , ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ , ಉಪಾಧ್ಯಕ್ಷರಾದ ವೆಂಕಟೇಶ್ ಬಂತಿ , ಎಲ್ಲಾ ವಾರ್ಡಿನ ಸದಸ್ಯರು,ದೇವಾಂಗ ಸಮಾಜದ ಮುಖಂಡರು ಮತ್ತು ಸ್ಥಳೀಯ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.
