ದೊಡ್ಡಬಳ್ಳಾಪುರ: ತಾಲ್ಲೂಕಿನ ಯಾವುದೇ ಸರ್ಕಾರಿ ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟರೆ ಸಾರ್ವಜನಿಕರು ಮೌನವಾಗಿರದೆ ಕೂಡಲೇ ಶಾಸಕರ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಬೇಕು ಅಥವಾ ನೇರವಾಗಿ ನನ್ನನ್ನು ಸಂಪರ್ಕಿಸಬೇಕು. ಜನರು ನೀಡಿರುವ ಅಧಿಕಾರವನ್ನು ಬಳಸಿಕೊಂಡು ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ಎಚ್ಚರಿಕೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಗೆ ನಾನು ಬದ್ಧರಾಗಿದ್ದೇನೆ. ತಾಲ್ಲೂಕಿನ ಜನತೆ ನೀಡಿರುವ ಅಧಿಕಾರವನ್ನು ಎಂದಿಗೂ ದುರುಪಯೋಗಪಡಿಸಿಕೊಂಡಿಲ್ಲ. ಮುಂದೆಯೂ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಜನಸೇವೆ ಮುಂದುವರಿಸುತ್ತೇನೆ ಎಂದು ಹೇಳಿದರು.
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ತಾಲ್ಲೂಕಿನಲ್ಲಿ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರಿಂದಲೂ ಹಣ ಪಡೆದಿಲ್ಲ, ಮುಂದೆಯೂ ಪಡೆಯುವುದಿಲ್ಲ. ಹಾಗಿರುವಾಗ ಅಧಿಕಾರಿಗಳು ಸಾರ್ವಜನಿಕರಿಂದ ಲಂಚ ಪಡೆಯಲು ಯಾವುದೇ ಕಾರಣವಿಲ್ಲ ಎಂದು ಅವರು ಹೇಳಿದರು.
ತಾಲ್ಲೂಕಿನಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಅಧಿಕಾರಿ ಸಾರ್ವಜನಿಕರಿಂದ ಹಣ ಅಥವಾ ಲಂಚಕ್ಕೆ ಬೇಡಿಕೆ ಇಟ್ಟರೆ ಅದನ್ನು ಪ್ರಶ್ನಿಸಬೇಕು. ಕೂಡಲೇ ಶಾಸಕರ ಕಚೇರಿಗೆ ದೂರು ನೀಡಬೇಕು ಅಥವಾ ನೇರವಾಗಿ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಬೇಕು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದ್ದಾರೆ.
