ದೊಡ್ಡಬಳ್ಳಾಪುರ : ಯೂಟ್ಯೂಬ್ ಮತ್ತು ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಹೆಸರಿನಲ್ಲಿ ಹಿಂದೂ ಧರ್ಮ ಹಾಗೂ ಆರಾಧ್ಯ ದೇವತೆಗಳ ಕುರಿತು ಅತ್ಯಂತ ಕೀಳುಮಟ್ಟದ ಮತ್ತು ಅಶ್ಲೀಲ ಹೇಳಿಕೆ ನೀಡಿರುವ ಆರ್ಯವರ್ಧನ್ ಗುರೂಜಿ ಎಂಬುವವರ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ ಎಂದು ಶ್ರೀರಾಮಸೇನೆ ಕರ್ನಾಟಕ ರಾಜ್ಯದ ಧರ್ಮ ಪ್ರಚಾರಕ ಶ್ರೀನಿವಾಸ ಗುರೂಜೀ ತಿಳಿಸಿದರು.
ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ (DySP) ಹಾಗೂ ಆರಕ್ಷಕ ವೃತ್ತ ನಿರೀಕ್ಷಕರಿಗೆ (CI) ಈ ಕುರಿತು ದೂರು ಸಲ್ಲಿಸಿ ನಂತರ ಮಾತನಾಡಿದ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ವಿವಿಧ ಪೇಜ್ಗಳಲ್ಲಿ ಆರ್ಯವರ್ಧನ್ ಗುರೂಜಿ ಅವರ ವಿಡಿಯೋವೊಂದು ತೀವ್ರ ವಿವಾದ ಸೃಷ್ಟಿಸಿದೆ. ಸದರಿ ವಿಡಿಯೋದಲ್ಲಿ ಗುರೂಜಿ ಅವರು ಹಿಂದೂಗಳ ಆರಾಧ್ಯ ದೇವತೆಯಾದ ಲಕ್ಷ್ಮಿ ದೇವಿಯ ಹೆಸರನ್ನು ಬಳಸಿಕೊಂಡು ಅತ್ಯಂತ ಅಸಭ್ಯ, ಆಕ್ಷೇಪಾರ್ಹ ಮತ್ತು ಅಶ್ಲೀಲವಾಗಿ ಮಾತನಾಡಿದ್ದಾರೆ. ಇವರ ಈ ಹೇಳಿಕೆಯು ಕೋಟ್ಯಂತರ ಹಿಂದೂ ಧರ್ಮೀಯರ ಹಾಗೂ ದೈವಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟುಮಾಡಿದೆ ಮತ್ತು ಸಮಾಜದಲ್ಲಿ ಸೌಹಾರ್ದತೆಯನ್ನು ಕದಡುವ ಕೃತ್ಯವಾಗಿದೆ ಎಂದು ದೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದರು.
ನಮ್ಮ ಪವಿತ್ರ ಧರ್ಮಶಾಸ್ತ್ರಗಳಲ್ಲಾಗಲಿ, ವೇದ-ಉಪನಿಷತ್ತುಗಳಲ್ಲಾಗಲಿ ಅಥವಾ ಯಾವುದೇ ಪುರಾಣಗಳಲ್ಲಾಗಲಿ ಇಂತಹ ಅಶ್ಲೀಲ ಮತ್ತು ಕೀಳುಮಟ್ಟದ ಉಲ್ಲೇಖಗಳು ಎಲ್ಲಿಯೂ ಇಲ್ಲ. ಕೇವಲ ಪ್ರಚಾರಕ್ಕಾಗಿ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸಲು ಇಂತಹ ಹೇಳಿಕೆ ನೀಡಲಾಗುತ್ತಿದೆ. ಆದ್ದರಿಂದ ಹೊಸ ಕಾನೂನಾದ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಪೊಲೀಸರು ತಕ್ಷಣವೇ ಎಫ್.ಐ.ಆರ್ (FIR) ದಾಖಲಿಸಿ ಆರ್ಯವರ್ಧನ್ ಗುರೂಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ದೂರಿನೊಂದಿಗೆ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳು ಹಾಗೂ ವಿಡಿಯೋ ಲಿಂಕ್ಗಳ ನಕಲು ಪ್ರತಿಗಳನ್ನು (Screenshots) ಸಾಕ್ಷ್ಯಾಧಾರವಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ದೊಡ್ಡಬಳ್ಳಾಪುರ ಪೊಲೀಸರು ದೂರನ್ನು ಸ್ವೀಕರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
