ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊ*ಲೆ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಹಣದ ವಿಚಾರದಲ್ಲಿ ಹಳೆಯ ದ್ವೇಷದಿಂದ ದಿನಾಂಕ :07.01.2019 ರಂದು ದೊಡ್ಡಬಳ್ಳಾಪುರದ ದೇವರಾಜನಗರದ ನಿವಾಸಿ ಎನ್. ಗಂಗಾಧರ @ ದಾಸ ಎಂಬ ವ್ಯಕ್ತಿಯನ್ನು ಅದೇ ಏರಿಯಾದ ತನ್ನ ಸ್ನೇಹಿತ ಆನಂದ ಎಸ್ @ ಕಬಾಬ್ ಆನಂದ ಎಂಬಾತ ಕೊ*ಲೆ ಮಾಡಿದ್ದ.
*ಘಟನೆ ಹಿನ್ನೆಲೆ*
ಕೊಲೆಯಾದ ಎನ್. ಗಂಗಾಧರ ಆರೋಪಿ ಆನಂದನನ್ನು ಹೊಡೆಯುವ ಉದ್ದೇಶದಿಂದ ಮೊದಲೇ ಯೋಜನೆ ಮಾಡಿ, ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ವಾಸಿ ಪವನ್ ಕುಮಾರ್ @ ಪವನ್ @ ಬೆಂಕಿ ಎಂಬ ವ್ಯಕ್ತಿಯ ಜೊತೆ ರಾತ್ರಿ ಸುಮಾರು 9.15 ಗಂಟೆಗೆ ದೊಡ್ಡಬಳ್ಳಾಪುರದ ಪ್ರೀತಿ ವೈನ್ಸ್ ಸರ್ಕಲ್ ಬಳಿಗೆ ಗಂಗಾಧರ ಬಂದಿದ್ದ. ಬಳಿಕ ಆನಂದನನ್ನು ಪವನ್ ಕುಮಾರನ ಮೂಲಕ ಕರೇನಹಳ್ಳಿ ಗ್ರಾಮಕ್ಕೆ ಹೊಗುವ 9ನೇ ಕ್ರಾಸ್ ನ ಕಚ್ಚಾ ರಸ್ತೆಗೆ ಕರೆಸಿ ಗಂಗಾಧರ @ ದಾಸನು ಆರೋಪಿ ಆನಂದ @ ಕಬಾಬ್ ಆನಂದನನಿಗೆ ಹೊಡೆಯಲು ಹೋದಾಗ ಆರೋಪಿ ಆನಂದ ಗಂಗಾಧರ ಕೈಯಲ್ಲಿದ್ದ ಮಚ್ಚನ್ನು ಕಿತ್ತುಕೊಂಡು ಗಂಗಾಧರ @ ದಾಸನ ಮೇಲೆ ಹಲ್ಲೆ ಮಾಡಿ, ಕೊ*ಲೆ ಮಾಡಿದ್ದಾನೆ.
ಈ ವೇಳೆ ಗಲಾಟೆ ಬಿಡಿಸಲು ಬಂದ ಪವನ್ ಕುಮಾರನಿಗೂ ಸಹ ಆನಂದ ಹಲ್ಲೆ ಮಾಡಿ, ಕೊ*ಲೆ ಯತ್ನ ಮಾಡಿರುವ ಬಗ್ಗೆ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಅಂದಿನ ತನಿಖಾಧಿಕಾರಿ, ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಜು.ಜಿ, ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು,
ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದ ಆರೋಪಿ ಆನಂದ ಅಪರಾಧ ಎಸಗಿರುವುದು ಸಾಭೀತಾದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಾಲ್ಕನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 20,000/ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
