ದೊಡ್ಡಬಳ್ಳಾಪುರ : ಕನ್ನಡ ಜಾಗೃತಿ ವೇದಿಕೆಯ ತಾಲೂಕು ಘಟಕದಿಂದ ಈ ದಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಹಾಗೂ ಕೊರತೆಗಳ/ ನೂನ್ಯತೆ ಬಗ್ಗೆ ತಾಲೂಕು ಆರೋಗ್ಯ (ಟಿ ಹೆಚ್ ಓ) ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಹೆಚ್ ಎಸ್ ಅಗ್ನಿ ವೆಂಕಟೇಶ್ ಮಾತನಾಡಿ ಪ್ರಸೂತಿ ಸಮಯದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸಹಜ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಹಣಕ್ಕಾಗಿ ಸಿಸರಿಯನ್ ಮುಖಾಂತರ ಹೆರಿಗೆಯನ್ನು ಮಾಡಿಸುತ್ತಾರೆ ಎಂಬ ಆರೋಪವಿದೆ. ಈ ಆಸ್ಪತ್ರೆಗೆ ಹೊರ ರಾಜ್ಯಗಳಿಂದ ವಲಸೆ ಬಂದಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಾರೆ ಸಮಯಕ್ಕೆ ಸರಿಯಾಗಿ ವೈದ್ಯರು ಲಭ್ಯವಾಗುವುದಿಲ್ಲ ಹಾಗೂ ಅಗತ್ಯ ಔಷಧಿಗಳ ಲಭ್ಯತೆಯ ಕೊರತೆ ಇದೆ ಎಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ ಆದರೂ ಅಧಿಕಾರಿಗಳು ಕ್ರಮ ಕೈಕೊಂಡಿಲ್ಲ ಎಂದರು.
ತಾಲೂಕು ಅಧ್ಯಕ್ಷ ಶಶಿಧರ್ ಮಾತನಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೆ ಸರಿಸುಮಾರು 30 ರಿಂದ 35 ಲಕ್ಷಕ್ಕಿಂತಲೂ ಅಧಿಕ ಹಣ ಕೇವಲ ಔಷಧಿಗಳಿಗಾಗಿ ಅವಶ್ಯಕತೆ ಇದೆ ಆದರೆ ಸರ್ಕಾರದಿಂದ ಸಿಗುತ್ತಿರುವುದು ಕೇವಲ 3 ಅಥವಾ 4 ಲಕ್ಷ ಮಾತ್ರ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆಗಳು ಪೂರ್ಣ ಉಚಿತವಾಗಿ ನೀಡಬೇಕು ಕೆಲ ಸಿಬ್ಬಂದಿಗಳು ಬಡ ರೋಗಿಗಳಿಂದ ಸರಿಸುಮಾರು ಹತ್ತು ಸಾವಿರದವರೆಗೆ ಹಣವನ್ನು ದೋಚುತಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್ ರವರು, ತಾಲ್ಲೂಕು ಅಧ್ಯಕ್ಷ ಸಿ.ಶಶಿಧರ್, ಮಹಿಳಾ ಅಧ್ಯಕ್ಷರಾದ ಮುನಿರತ್ನಮ್ಮ, ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವ್ , ಉಪಾಧ್ಯಕ್ಷ ಶಿವಸ್ವಾಮಿ, ಲೋಕೇಶ್, ಬುಲೆಟ್ ಚಂದ್ರು, ನಟರಾಜು, ಉಮಾದೇವಿ, ಚನ್ನಗಂಗಮ್ಮ, ಪುಟ್ಟಗೌರಿ, ಭುವನೇಶ್ವರಿ ಸೇರಿದಂತೆ ಹಲವರು ಹಾಜರಿದ್ದರು.
