ಪಾಲನಜೋಗಿಹಳ
ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲನಜೋಗಿಹಳ್ಳಿ ಗ್ರಾಮದಲ್ಲಿ ಶಾಲೆ, ಅಂಗನವಾಡಿ, ದೇವಸ್ಥಾನ, ಅಂಗಡಿಗಳು ಹಾಗೂ ವಸತಿ ಪ್ರದೇಶದ ಸಮೀಪದಲ್ಲೇ ಕಸ ಹಾಕಲಾಗುತ್ತಿದೆ ಈ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಕಸದ ರಾಶಿ ಹೊರಸೂಸುವ ದುರ್ವಾಸನೆ ಸಾರ್ವಜನಿಕರನ್ನು ಶಾಲಾ ಮಕ್ಕಳನ್ನು ಸ್ವಾಗತಿಸುತ್ತಿದೆ.

ಯಾವುದೇ ಭಯವಿಲ್ಲದೆ ಎಲ್ಲೆಂದರಲ್ಲಿ ಅಸಮರ್ಪಕವಾಗಿ ಕಸ ಹಾಕುತ್ತಿರುವ ಕೆಲ ನಿವಾಸಿಗಳಿಂದ ಸ್ಥಳೀಯ ನಿವಾಸಿಗಳು, ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಈ ಕಸದ ರಾಶಿಯಿಂದ ಬರುವ ವಾಸನೆ, ನೊಣ ಮತ್ತು ಸೊಳ್ಳೆಗಳಿಂದ ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥ್.
ಆಹಾರ ತ್ಯಾಜ್ಯ ಹಾಗೂ ಮಾಂಸದಂಗಡಿಗಳ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗುತ್ತಿರುವುದರಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಕಸದ ರಾಶಿಯ ಸುತ್ತಮುತ್ತ ನಾಯಿಗಳು ಗುಂಪುಗೂಡುತ್ತಿರುವುದರಿಂದ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು, ಆತಂಕದಲ್ಲೇ ಓಡಾಡುವಂತಾಗಿದೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಗಾಯತ್ರಿ ಮಂಜುನಾಥ್ ಮಾತನಾಡಿ, ಕಸದ ಸಮಸ್ಯೆ ನಿವಾರಣೆಗೆ ಹಲವು ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ, ಸಿಸಿಟಿವಿ ಅಳವಡಿಸಿ ಕಸ ಎಸೆಯುವವರಿಗೆ ದಂಡ ವಿಧಿಸುವಂತೆ ಮನವಿ ಮಾಡಿದ್ದೇವೆ ಆದರೆ ಪಂಚಾಯತಿ ಈವರೆಗೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪಂಚಾಯಿತಿ ಸಿಬ್ಬಂದಿ ಪ್ರತಿದಿನ ಮನೆಮನೆಗೆ ತೆರಳಿ ಕಸ ಸಂಗ್ರಹಿಸಬೇಕು. ಆದರೆ ವಾರಕ್ಕೊಮ್ಮೆ ಕಸ ಸಂಗ್ರಹಿಸಲು ಟ್ರ್ಯಾಕ್ಟರ್ ಬರುತ್ತದೆ ಇದರಿಂದ ಜನರು ಎಲ್ಲೆಂದರಲ್ಲಿ ಕಸ ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಕಸದ ಸಮಸ್ಯೆಯಿಂದಾಗಿ ಪಾಲನಜೋಗಿಹಳ್ಳಿಯ ಹಲವು ಚರಂಡಿಗಳು ಮುಚ್ಚಿಹೋಗಿವೆ. ರಸ್ತೆ ಬದಿ ಕಸಎಸೆಯುವ ಕೆಲವರು ಮನಸ್ಸಿಗೆ ಬಂದ ಕಡೆಯಲ್ಲಾ ಎಸೆಯುತ್ತಾರೆ ಅವರಿಗೆ ದಂಡಹಾಕಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಅಲ್ಲದೆ ಪ್ರತಿ ನಿತ್ಯ ಕಸ ಸಂಗ್ರಹಣೆ ಈ ಸಮಸ್ಯೆಯಿಂದ ಸಾರ್ವಜನಿಕರನ್ನು ಪಾರುಮಾಡಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
