ದೊಡ್ಡಬಳ್ಳಾಪುರ : ದೊಡ್ಡ ಬೆಳವಂಗಲ ವ್ಯಾಪ್ತಿಯ ಫಲವತ್ತಾದ ಭೂಮಿಗಳನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಕೆ ಐ ಎ ಡಿ ಬಿ ಮುಂದಾಗಿದೆ ಕಳೆದ 102 ದಿನಗಳಿಂದ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಲಾಗುತ್ತಿದೆ.ಇಂದು ರಕ್ತ ಕೊಟ್ಟೆವು ಭೂಮಿ ಬಿಡೇವು ಎಂಬ ಘೋಷ ವಾಕ್ಯದೊಂದಿಗೆ ಇಂದು ವಿಶೇಷವಾಗಿ ರಕ್ತದಾನ ಶಿಬಿರದ ಮೂಲಕ ಹೋರಾಟ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಭೂಮಿ ನೀಡುವ ಪ್ರಶ್ನೆಯಿಲ್ಲ ಎಂದು ಹೋರಾಟ ಸಮಿತಿ ಅಧ್ಯಕ್ಷ ಡಿ.ಸಿ ಶಶಿಧರ್ ತಿಳಿಸಿದರು.
ತಾಲೂಕಿನ ದೊಡ್ಡಬೆಳವಂಗಲ ನಾಡಕಚೇರಿ ಮುಂಭಾಗದಲ್ಲಿನ ಹೋರಾಟ ಸ್ಥಳದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. 102 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಕೂಡ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಸರ್ಕಾರದ ವಶಕ್ಕೆ ನೀಡುವುದಿಲ್ಲ. 5 ಹಳ್ಳಿಗಳ ಸುಮಾರು 2100 ಎಕರೆ ಭೂಸ್ವಾಧೀನ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರಕ್ಕೆ ಸಂದೇಶ ಮುಟ್ಟಿಸಲು. ವಿಧಾನಸೌಧ ಚಲೋ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ರೈತರು ದೇಶದ ಬೆನ್ನೆಲುವು ಎಂದು ಹೇಳುತ್ತಾರೆ ಆದರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಿದ್ದು, ರೈತರ ಬೆನ್ನೆಲುಬು ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ರೈತ ಮುಖಂಡ ಡಿಸಿ ರಾಮೇಗೌಡ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈವರೆಗೆ ಸುಮಾರು 2೦ ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಮತ್ತೆ 2100 ಎಕರೆ ಪಡೆದರೆ ರೈತರು ಏನು ಮಾಡಬೇಕು. ನಾವು ಕೃಷಿ ನಂಬಿ ಜೀವನ ಸಾಗಿಸುತ್ತಿದ್ದೇವೆ . ನಮ್ಮ ಭೂಮಿ ನೀಡಿ ನಾವು ಏನು ಮಾಡಬೇಕು. ಎಷ್ಟೇ ಕೋಟಿ ನೀಡಿದರೂ ಕೂಡ ಭೂಮಿ ನೀಡುವುದಿಲ್ಲ. ರಕ್ತ ನೀಡುತ್ತೇವೆ ಆದರೆ ಭೂಮಿ ನೀಡುವುದಿಲ್ಲ. ರಾಜಕೀಯ ಪಕ್ಷಗಳು ರೈತರೊಂದಿಗೆ ಆಟವಾಡುತ್ತಿವೆ. ದಬ್ಬಾಳಿಕೆ ಮಾಡಲಾಗುತ್ತಿದೆ. ರೈತರು ಎದ್ದರೆ ಸರ್ಕಾರ ಉಳಿಯಲ್ಲ. ತಾಲೂಕಿನಲ್ಲಿ ರೈತ ಹೋರಾಟಕ್ಕೆ ಎಲ್ಲಾ ಪಕ್ಷಗಳು ಬೆಂಬಲ ನೀಡಿವೆ. ಯಾವ ಹಂತದಲ್ಲೂ ಕೂಡ ಭೂಮಿ ನೀಡುವುದಿಲ್ಲ. ಆದರೆ ಈವರೆಗೂ ಸ್ಥಳೀಯ ಸಂಸದರು, ಅಧಿಕಾರಿಗಳು ಇಲ್ಲಿಗೆ ಬಂದಿಲ್ಲ. ಮುಂದಿನ ದಿನದಲ್ಲಿ ಯಾವುದೇ ಸ್ಪಂದನೆ ಸಿಗದಿದ್ದರೆ ರಸ್ತೆ ತಡೆ ನಡೆಸಿ ಹೋರಾಟ ಮಾಡಲಾಗುತ್ತದೆ ಎಂದರು
ರೈತ ಮುಖಂಡ ಧರ್ಮೆಂದ್ರ ಮಾತನಾಡಿ, ರೈತ ಹೋರಾಟ 100 ದಿನ ಪೂರೈಸಿದ ಹಿನ್ನಲೆ ರಕ್ತದಾನ ಮಾಡುತ್ತಿದ್ದೇವೆ. ತಾಲೂಕನ್ನೇ ಗುರಿಯಾಗಿಸಿ ಭೂಸ್ವಾಧೀನ ಮಾಡುತ್ತಿದ್ದಾರೆ. ಯಾರನ್ನೂ ಸಂಪರ್ಕಿಸದೇ ಇಲ್ಲಿ ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ . ಇಲ್ಲಿ ಹಸು, ಕೋಳಿ, ಮೇಕೆ ಸಾಕಾಣಿಕೆ ಹೆಚ್ಚಾಗಿದೆ, ವ್ಯವಸಾಯ, ಹೈನುಗಾರಿಕೆ ನಂಬಿ ಜೀವನ ಸಾಗಿಸುವ ಸಾವಿರಾರು ಕುಟುಂಬಗಳಿವೆ. ಬಡ ರೈತರ ಭೂಮಿ ಯಾಕೆ ಸ್ವಾಧೀನ ಮಾಡುತ್ತಾರೆ. ವ್ಯವಸಾಯ ಒಂದೇ ನಮ್ಮ ಗುರಿ, ನಾವು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಸರ್ಕಾರ ಎಚ್ಚೆತ್ತುಕೊಳ್ಳದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಅರೆ ಬೆತ್ತಲೆ ಹೋರಾಟ, ಹೆದ್ದಾರಿ ತಡೆ, ಪಂಜಿನ ಮೆರವಣಿಗೆ ಮಾಡುತ್ತೇವೆ ಎಂದರು.
ಈ ವೇಳೆಯಲ್ಲಿ ರೈತ ಹೋರಾಟಗಾರರಾದ ವಿಜಯ್ ಕುಮಾರ್, ಹಬೀಬ್, ರಾಮಣ್ಣ, ಮಲ್ಲರಾಜು, ನಾರಾಯಣಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು
