ದೊಡ್ಡಬಳ್ಳಾಪುರ : ಸುಮಿತ್ರ ಆನಂದ್ ರವರ ರಾಜೀನಾಮೆಯಿಂದ ತೆರವಾಗಿದ್ದ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಉಪವಿಭಾಗ ಅಧಿಕಾರಿ ಹಾಗೂ ಚುನಾವಣಾಧಿಕಾರಿಗಳಾದ ಮಂಜುನಾಥ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು ಫಲಿತಾಂಶ ಹೊರಬಿದ್ದಿದೆ. ಎನ್.ಡಿ.ಎ ಮೈತ್ರಿ ಒಕ್ಕೂಟದ ಅಭ್ಯರ್ಥಿ(ಜೆಡಿಎಸ್ ಅಭ್ಯರ್ಥಿ )ಪ್ರಭಾ ನಾಗರಾಜ್ 24 ಮತಗಳನ್ನು ಪಡೆಯುವ ಮೂಲಕ ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾದ ಪ್ರಭ ನಾಗರಾಜ್ ಅವರಿಗೆ ಸ್ಥಳೀಯ ಪ್ರಮುಖರು ಗಣ್ಯರು ಕಾರ್ಯಕರ್ತರು ಸಿಹಿತಿನಿಸಿ ಪುಷ್ಪಮಾಲೆ ಅರ್ಪಿಸಿ ಅಭಿನಂದನೆ ಸಲ್ಲಿಸಿದರು
ಈ ವೇಳೆ ನೂತನ ಅಧ್ಯಕ್ಷರಾದ ಪ್ರಭಾ ನಾಗರಾಜ್ ಮಾತನಾಡಿ ನಮ್ಮ ಪಕ್ಷದ ಎಲ್ಲಾ ಹಿರಿಯರು ಹಾಗೂ ಪ್ರಮುಖರ ಆಶೀರ್ವಾದ ಜೊತೆಗೆ ಸ್ಥಳೀಯ ಸಂಸದರು,ಶಾಸಕರು ಮತ್ತು ನಗರಸಭಾ ಸದಸ್ಯರ ಸಹಕಾರದಿಂದ ಇಂದು ಜೆಡಿಎಸ್ ಪಕ್ಷಕ್ಕೆ ನಗರಸಭಾ ಅಧ್ಯಕ್ಷ ಸ್ಥಾನ ಒಲಿದಿದೆ. ಇರುವ ಅಲ್ಪಾವಧಿಯಲ್ಲಿ ಶಕ್ತಿ ಮೀರಿ ಉತ್ತಮ ಕಾರ್ಯಗಳನ್ನು ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಸರ್ವ ಸದಸ್ಯರ ವಿಶ್ವಾಸ ಪಡೆದು ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಜೆಡಿಎಸ್ ಮುಖಂಡ ದಿ || ಎಚ್ ಅಪ್ಪಯ್ಯಣ್ಣ ಅವರನ್ನು ನೆನೆದು ಭಾವುಕ:
ನಮ್ಮ ಜೆಡಿಎಸ್ ಪಕ್ಷವು ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬುದು ದಿವಂಗತ ಎಚ್ ಅಪ್ಪಣ್ಣನವರ ಕನಸಾಗಿತ್ತು , ಈ ಸಮಾರಂಭವು ಅವರ ನೇತೃತ್ವದಲ್ಲಿ ನಡೆಯಬೇಕಿತ್ತುಆದರೆ ಇಂದು ಅವರು ನಮ್ಮ ಜೊತೆಗಿಲ್ಲ ಅವರು ನಮ್ಮ ಜೆಡಿಎಸ್ ಪಕ್ಷಕ್ಕೆ ಶಕ್ತಿಯಾಗಿದ್ದರು ಅವರ ಕನಸು ಇಂದು ನನಸಾಗಿದೆ ಎಂದರು.
ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ ಕಳೆದ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಆಗಿ ಚುನಾವಣೆ ಎದುರಿಸಿತ್ತು ಆ ಸಂದರ್ಭದಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆಯಂತೆ ನಗರಸಭಾ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವ ಮೂಲಕ ಬಿಜೆಪಿ ತನ್ನ ಮಾತನ್ನು ಉಳಿಸಿಕೊಂಡಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಭಾ ನಾಗರಾಜ್ ರವರು ತಮ್ಮ ಪಕ್ಷ ನಿಷ್ಠೆ ಸೇವಾ ಕಾರ್ಯಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿರುವುದು ವಿಶೇಷ ಇವರ ಗೆಲುವಿಗೆ ಶ್ರಮಿಸಿದ ಎಲ್ಲಾ ಮುಖಂಡರಿಗೂ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕಿನ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜುರವರು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಕೆ ಸುಧಾಕರ್ ರವರು ಭಾಗವಹಿಸಿ ಮತದಾನ ಮಾಡುವ ಮೂಲಕ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಅವರಿಗೆ ಬೆಂಗಳೂರು ಗ್ರಾಮಾಂತರ ಜೆಡಿಎಸ್ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನೂತನ ನಗರಸಭಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಭಾ ನಾಗರಾಜ್ ರವರು ತಮಗೆ ದೊರೆತಿರುವ ಅಲ್ಪಾವಧಿಯಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ನಗರಸಭಾ ಸದಸ್ಯರು ಹಾಗೂ ಜೆಡಿಎಸ್ ಪ್ರಮುಖರಾದ ತಾ.ನ ಪ್ರಭುದೇವ್ ಮಾತನಾಡಿ ನೂತನ ಅಧ್ಯಕ್ಷರಿಗೆ ಕೇವಲ 98 ದಿನಗಳ ಅವಧಿ ಇದೆ ಈ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ನಗರ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ಭರವಸೆ ಇದೆ. ಅಧ್ಯಕ್ಷರು ಕೈಗೊಳ್ಳುವ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಡಾ. ಕೆ. ಸುಧಾಕರ್, ಶಾಸಕ ಧೀರಜ್ ಮುನಿರಾಜ್, ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಹರೀಶ್ ಗೌಡ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಬಿ ಮುನೇಗೌಡ, ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್, ಮುಖಂಡರರಾದ ಕೊನಘಟ್ಟ ಆನಂದ್, ಹಾಡೋನಹಳ್ಳಿ ನಾಗರಾಜ್,ಅಶ್ವತ್ ನಾರಾಯಣ್, ಅಂಜನ್ ಗೌಡ, ಮಂಜುನಾಥ್ ಸೇರಿದಂತೆ ನಗರಸಭೆಯ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
