ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ನವೋದಯ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಆಸರೆ–ಸನ್ಮಿತ್ರ ಯೋಜನೆಯಡಿ ನಗರದ ಬಸವ ಭವನದಲ್ಲಿ ಭಾನುವಾರ ವಯೋವೃದ್ಧರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರದಲ್ಲಿ ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ರಕ್ತದೊತ್ತಡ, ಮಧುಮೇಹ ಪರೀಕ್ಷೆ, ಇಸಿಜಿ ಹಾಗೂ ಹೃದಯ ಸಂಬಂಧಿತ ತಪಾಸಣೆಗಳನ್ನು ನಡೆಸಲಾಯಿತು. ಅಲ್ಲದೆ ಮನೋವೈದ್ಯರಿಂದ ವಯೋವೃದ್ಧರಿಗೆ ಆಪ್ತ ಸಮಾಲೋಚನೆ ನೀಡಲಾಯಿತು. ಸನ್ಮಿತ್ರ ಯೋಜನೆಯಡಿ ಗುರುತಿಸಲ್ಪಟ್ಟಿರುವ 30 ಯುವಕರಿಗೂ ಸೈಕಿಯಾ ಟ್ರಸ್ಟ್ ಸಹಯೋಗದಲ್ಲಿ ಸಮಾಲೋಚನೆ ಹಾಗೂ ವೈದ್ಯಕೀಯ ಸಲಹೆ ನೀಡಲಾಯಿತು.
ಶಿಬಿರಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ ಚಾಲನೆ ನೀಡಿ ಮಾತನಾಡಿದರು ಪೊಲೀಸ್ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ಮನೆ-ಮನೆ ಪೊಲೀಸ್, ಆಸರೆ ಹಾಗೂ ಸನ್ಮಿತ್ರ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಸನ್ಮಿತ್ರ ಯೋಜನೆಯಡಿ ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆ ನೀಡುವ ಮೂಲಕ ದುಶ್ಚಟಗಳಿಂದ ಹೊರಬರಲು ಮಾರ್ಗದರ್ಶನ ಮಾಡಲಾಗುತ್ತಿದೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುತಿಸಲಾದ ವ್ಯಸನಿಗಳ ಹಿನ್ನೆಲೆಯನ್ನು ಪರಿಶೀಲಿಸಿ, ಅವರಿಗೆ ಮಾದಕ ವಸ್ತುಗಳು ಎಲ್ಲಿಂದ ದೊರೆಯುತ್ತವೆ ಹಾಗೂ ಯಾರ ಮೂಲಕ ತಲುಪುತ್ತವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ, ಮಾದಕ ವಸ್ತುಗಳು ಅವರ ಕೈಗೆ ಸಿಗದಂತೆ ತಡೆಯುವುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಾ. ಎಂ.ಬಿ. ನವೀನ್ ಕುಮಾರ್ ಮಾತನಾಡಿ, ಭೂಗಳ್ಳರು ಹಾಗೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ಕೆಲವರು ವಯೋವೃದ್ಧರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಸುವಂತಹ ಕೃತ್ಯಗಳಿಗೆ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ಹೇಳಿದರು.
ಗ್ರಾಮಾಂತರ ಪೊಲೀಸ್ ಠಾಣೆಯ 11 ಬೀಟ್ಗಳಿಂದ ಆಯ್ಕೆ ಮಾಡಲಾದ ಒಟ್ಟು 110 ವಯೋವೃದ್ಧರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಪೊಲೀಸ್ ಇಲಾಖೆಯ ವಿಶ್ವಾಸದ ಸಂಕೇತವಾಗಿ ವಿಶೇಷ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ, ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗ, ಇನ್ಸ್ಪೆಕ್ಟರ್ ಡಾ. ಎಂ.ಬಿ. ನವೀನ್ ಕುಮಾರ್, ಮನೋವೈದ್ಯ ಡಾ. ರವಿಕುಮಾರ್, ಡಾ. ಪರಮೇಶ್ವರ್, ಡಾ. ಇಂದಿರಾ, ನವೋದಯ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಜನಾರ್ದನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವೈದ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
