ದೊಡ್ಡಬಳ್ಳಾಪುರ, ಜು. 26: ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಶನಿವಾರ 600 ವರ್ಷಗಳ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಭೂತನೆರಿಗೆ ಹಬ್ಬ ವಿಜೃಂಭಣೆಯಿಂದ ನಡೆಯಿತು. ಹಬ್ಬದ ಅಂಗವಾಗಿ ಕೆಂಚಣ್ಣ ಹಾಗೂ ಕರಿಯಣ್ಣ ವೇಷಧಾರಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದು, ಅವರ ಆವೇಶಭರಿತ ನೃತ್ಯ ಮತ್ತು ಸಂಚಾರವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿದ್ದರು.
ಪಾಳ್ಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆರಂಭವಾದ ಆಚರಣೆ ಬಳಿಕ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸಮಾಪ್ತಿಯಾಯಿತು. ಕೆಂಚಣ್ಣ ಮತ್ತು ಕರಿಯಣ್ಣ ವೇಷಧಾರಿಗಳು ಕೈಯಲ್ಲಿ ಖಡ್ಗ ಹಾಗೂ ಗುರಾಣಿ ಹಿಡಿದು ಸಂಚರಿಸಿದ್ದು ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ದೇವಸ್ಥಾನದಲ್ಲಿ ಮಂತ್ರೋಚ್ಚಾರಣೆ ಬಳಿಕ ವೇಷಧಾರಿಗಳ ಮೇಲೆ ದೇವತಾ ಆವಾಹನೆ ನಡೆಯುತ್ತದೆ ಎಂಬುದು ಸ್ಥಳೀಯರ ನಂಬಿಕೆ. ಆವಾಹನೆಯ ನಂತರ ಅವರು ಆವೇಶದಿಂದ ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತಾರೆ. ಹಸಿವು ತಣಿಸುವ ಸಂಕೇತವಾಗಿ ಹಲಸು, ಬಾಳೆಹಣ್ಣಿನ ರಸಾಯನ ಹಾಗೂ ಕೋಳಿಯನ್ನು ಸಮರ್ಪಿಸುವ ಸಂಪ್ರದಾಯವೂ ನಡೆಯಿತು. ಯುವಕರು ವೇಷಧಾರಿಗಳನ್ನು ಹುರಿದುಂಬಿಸಿ ಸಂಭ್ರಮಿಸಿದರೆ, ಮಹಿಳೆಯರು ಹಾಗೂ ಹಿರಿಯರು ದೂರದಿಂದಲೇ ಈ ವಿಶಿಷ್ಟ ಆಚರಣೆಯನ್ನು ವೀಕ್ಷಿಸಿದರು.
ಭೂತನೆರಿಗೆ ಹಬ್ಬಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯ ಮರುದಿನವಾದ ದ್ವಾದಶಿಯಂದು ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿಷ್ಣುವಿನ ದ್ವಾರಪಾಲಕರಾದ ಜಯ–ವಿಜಯರು ಶಾಪದ ಪರಿಣಾಮವಾಗಿ ಕಲಿಯುಗದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣರ ರೂಪದಲ್ಲಿ ಭೂಲೋಕಕ್ಕೆ ಬಂದರು ಎಂಬ ಪೌರಾಣಿಕ ನಂಬಿಕೆ ಈ ಹಬ್ಬದ ಹಿನ್ನೆಲೆಯಾಗಿದೆ. ಕರಿಯಣ್ಣ ಹಾಗೂ ಕೆಂಚಣ್ಣ ವೇಷಧಾರಿಗಳು ಮನೆಗೆ ಬಂದರೆ ದುಷ್ಟಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇಂದಿಗೂ ಜೀವಂತವಾಗಿದೆ. ಈ ವಿಶಿಷ್ಟ ಸಂಪ್ರದಾಯವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಜನರು ತೂಬಗೆರೆ ಗ್ರಾಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರವಿಂದ, ಕೆಪಿಸಿಸಿ ಸದಸ್ಯ ಮುನಿರಾಜು, ಮುಖಂಡರಾದ ಕೃಷ್ಣಪ್ಪ, ರವಿ ಸಿದ್ದಪ್ಪ, ಯುವ ಮುಖಂಡ ಉದಯ ಆರಾಧ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
