ದೊಡ್ಡಬಳ್ಳಾಪುರ : ಪ್ರತಿನಿತ್ಯ ಜನಸಾಮಾನ್ಯರಿಗೆ ಪ್ರಚಲಿತ ವಿದ್ಯಾಮಾನಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಎಲ್ಲಾ ಸಂಪಾದಕರು ಹಾಗೂ ವರದಿಗಾರರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ರಾಜ್ಯ ಸಹಕಾರದೊಂದಿಗೆ ಸಕಲ ಸೌಲಭ್ಯ ಒದಗಿಸಲು ಈ ಸಂಘದ ಗುರುತಿನ ಚೀಟಿ ಅಗತ್ಯವಾಗಿದ್ದು ಇದು ಜಿಲ್ಲಾ ಸಮಿತಿ ಸಹಕಾರದೊಂದಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರಿಗೆ 2026- 27ನೇ ಸಾಲಿನ ಸದಸ್ಯತ್ವ ಗುರುತಿನ ಚೀಟಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ವಿತರಣೆ ಮಾಡಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರಿಗೆ 2026- 27ನೇ ಸಾಲಿನ ಸದಸ್ಯತ್ವ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂಘದ ವತಿಯಿಂದ ಆಯೋಜನೆ ಮಾಡಲಾಗುವ ಸಭೆಯಲ್ಲಿ ಎಲ್ಲರು ಕಡ್ಡಾಯವಾಗಿ ಭಾಗವಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಈ ಮೂಲಕ ಸಂಘದ ಹಾಗೂ ಸದಸ್ಯರ ಅಭಿವೃದ್ಧಿಗಾಗಿ ನಮ್ಮಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.
ಅಲ್ಲದೆ ತಾಲ್ಲೂಕಿನಲ್ಲಿ ಸುದ್ದಿ ನೀಡುವ ಬಿಡಿ ಬರಹಗಾರರಿಗೆ ವೇತನ, ಭತ್ಯೆ, ಹಾಗೂ ಆರೋಗ್ಯ ವಿಮೆ ಕಲ್ಪಿಸುವ ಮುಖ್ಯಉದ್ದೇಶವಿದ್ದು ದಿನಪತ್ರಿಕೆ ವರದಿಗಾರರಿಗೆ ಸೌಲಭ್ಯ ಕಲ್ಪಿಸುವ ಕುರಿತು ಜಿಲ್ಲಾ ಸಮಿತಿ ವತಿಯಿಂದ ರಾಜ್ಯ ಸಮಿತಿಗೆ ಪತ್ರ ರವಾನೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ನಮ್ಮ ಮನವಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷರಾದ ರಫಿ ಉಲ್ಲಾ, ಮುನಿವೀರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ರಮೇಶ್, ಜಿಲ್ಲಾ ಖಜಾಂಚಿ ಜೆ. ಮುನಿರಾಜು, ಜಿಲ್ಲಾ ಕಾರ್ಯದರ್ಶಿ ಸತೀಶ್, ಗಂಗರಾಜು ಶಿರವಾರ, ನೆಲ್ಲುಗುದ್ದಿಗೆ ಚಂದ್ರಪ್ಪ, ಸೇರಿದಂತೆ ತಾಲ್ಲೂಕಿನ ಪತ್ರಕರ್ತರು ಹಾಜರಿದ್ದರು.
