ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಮಳೆಯಿಲ್ಲ. ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಕಾಡುತ್ತಿದೆ. ಕಾವೇರಿ ಒಡಲು ಕೂಡ ಬರಿದಾಗುತ್ತಿದ್ದು, ಇಂತಹ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಪ್ರಶ್ನಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಕನ್ನಡ ಪರ ಒಕ್ಕೂಟದಿಂದ ಕಾವೇರಿ ನೀರು ನಿಯಂತ್ರಣ ಸಮಿತಿ ತೀರ್ಮಾನದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಕಾವೇರಿ ನೀರು ತಮಿಳುನಾಡಿಗೆ ನೀಡಿದರೆ ಕನ್ನಡಿಗರು ಏನು ಮಾಡಬೇಕು. ಡೆಡ್ ಸ್ಟೋರೇಜ್ ಬಿಟ್ಟರೆ ಕೇವಲ ೮-೯ ಟಿಎಂಸಿ ನೀರು ಮಾತ್ರ ಸದ್ಯ ಲಭ್ಯವಿದೆ. ಇದರಲ್ಲೂ ೪ ಟಿಎಂಸಿವರೆಗೆ ನೀರನ್ನು ತಮಿಳುನಾಡಿಗೆ ನೀಡಿದರೆ ಕನ್ನಡಿಗರು ಏನು ಮಾಡಬೇಕು. ಇಂತಹ ಸ್ಥಿತಿಯಲ್ಲಿ ಪ್ರಾಧಿಕಾರದ ಆದೇಶ ದಿಕ್ಕರಿಸುತ್ತೇವೆ. ರಾಜ್ಯ ಸರಕಾರ ಇದನ್ನು ತಿರಸ್ಕರಿಸಬೇಕು ಕನ್ನಡಿಗರ ಹಿತ ಕಾಪಾಡುವ ನಿಟ್ಟಿನಲ್ಲಿ ನ್ಯಾಯಮಂಡಳಿ ಮಧ್ಯಸ್ಥಿಕೆ ವಹಿಸಿ ಪರಿಶೀಲಿಸಿ ಆದೇಶ ನೀಡಬೇಕು. ಎಂತಹ ಪರಿಸ್ಥಿತಿಯಲ್ಲೂ ನೀರು ನೀಡಬಾರದೆಂದು ಒತ್ತಾಯಿಸುತ್ತೇವೆ ಅಂತೆಯೂ ಸರಕಾರ ನೀರು ಬಿಟ್ಟರೆ ಉಗ್ರಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ, ದೇಶದಲ್ಲಿ ಮಳೆ ಕೊರತೆಯಾಗಿದೆ ಎಲ್ಲೆಡೆ ಬರದ ಸ್ಥಿತಿಯಿದೆ. ವಾಡಿಕೆಗಿಂತ ಶೇ.೫೦ಕ್ಕೂ ಹೆಚ್ಚು ಮಳೆ ಕೊರತೆಯಾಗಿದ್ದು, ಕೆರೆಗಳು, ಜಲಾಶಯಗಳು ಬರಿದಾಗಿದೆ. ನಮಗೆ ನೀರಿನ ಕೊರತೆಯಿರುವಾಗ ನೀರನ್ನು ಹರಿಸುವುದು ಹೇಗೆ. ಪ್ರಾಧಿಕಾರವೂ ಕನ್ನಡಿಗರಿಗೆ ಮಾರಕವಾದ ಆದೇಶ ಮಾಡಿದೆ. ಕಾವೇರಿ ಪ್ರಾಧಿಕಾರ ಆದೇಶದಂತೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಸರಕಾರವೂ ಕೂಡ ಇದಕ್ಕೆ ಬದ್ಧವಾಗಿದ್ದು, ಕನ್ನಡಿಗರ, ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ದೊಡ್ಡಬಳ್ಳಾಪುರದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೂ ಜಾಥಾ ಮಾಡುವ ಮೂಲಕ ಪ್ರತಿಭಟನೆ ನಡೆಸಿ, ದೊಡ್ಡಬಳ್ಳಾಪುರ ತಹಶೀಲ್ದಾರ್ ಮಲ್ಲಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಕನ್ನಡ ಪರ ಹೋರಾಟಗಾರರಾದ ಆಂಜಿ, ವೆಂಕಟೇಶ್, ಮಂಜು, ಶಂಕರ್, ಫಯಾಜ್ , ಭಾಸ್ಕರ್, ಸುರೇಶ್, ಚೌಡರಾಜು ಸೇರಿದಂತೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಭಾಗಿಯಾಗಿದ್ದರು.
