ದೊಡ್ಡಬಳ್ಳಾಪುರ : ವಿದ್ಯಾರ್ಥಿಗಳು ಕೇವಲ ಉದ್ಯೋಗ ಆಯ್ಕೆ ಮಾಡುವವರಾಗದೇ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು. ಸರ್ಕಾರದ ವಿವಿಧ ಸ್ವಯಂ ಉದ್ಯೋಗ ಯೋಜನೆಗಳು, ಉದ್ಯಮ ಆರಂಭಿಸಲು ದೊರೆಯುವ ನೆರವು, ಕೌಶಲ್ಯಾಭಿವೃದ್ಧಿಯ ಮಹತ್ವ ಹಾಗೂ ಆತ್ಮವಿಶ್ವಾಸ, ನವೀನ ಆಲೋಚನೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಯಶಸ್ವಿ ಉದ್ಯಮಿಗಳಾಗಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ. ಜಗನ್ನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಬುಧವಾರ ಆಯೋಜಿಸಿದ್ದ “ಮೂರು ದಿನಗಳ ಉದ್ಯಮಶೀಲತೆ ಅರಿವು ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ, ಮಾತನಾಡಿದರು.ವಿದ್ಯಾರ್ಥಿಗಳು ಶಿಕ್ಷಣಾಭ್ಯಾಸ ಮುಗಿದ ಮೇಲೆ ಉದ್ಯೋಗಕ್ಕಾಗಿ ಅಲೆಯುವ ಬದಲು ಒಳ್ಳೆಯ ಕೌಶಲ್ಯ ಕಲಿತು ಸ್ವಂತ ಉದ್ಯಮ ಸ್ಥಾಪಿಸಿ, ಹತ್ತಾರು ಜನರಿಗೆ ಉದ್ಯೋಗ ನೀಡುವ ಯಶಸ್ವಿ ಉದ್ಯಮಿಗಳಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡೋರಿನ್ ಸ್ನೇಹಲತಾ ಕೋಟ್ಯಾನ್ ಅವರು, ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಉದ್ಯಮ ಸ್ಥಾಪನೆ, ಸರ್ಕಾರಿ ಯೋಜನೆಗಳು, ಸ್ವಯಂ ಉದ್ಯೋಗದ ಅವಕಾಶಗಳು ಹಾಗೂ ಯಶಸ್ವಿ ಉದ್ಯಮಿಯಾಗಲು ಅಗತ್ಯವಾದ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗುವುದು ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ್, ಸಹಾಯಕ ಪ್ರಾಧ್ಯಾಪಕ ಸತೀಶ್, ಪ್ರಾಧ್ಯಾಪಕ ಡಾ. ಗಂಗಾಧರಯ್ಯ, ಸಿಡಾಕ್ ಸಲಹೆಗಾರ ಡಿ.ಯು. ಹುಡೆದ್, ತರಬೇತಿದಾರ ಕು. ವೇದವತಿ ಆರ್. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
