ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವವನಾಗಿದ್ದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ “80ನೇ ಸ್ವಾತಂತ್ರ್ಯೋತ್ಸವ” ಕಾರ್ಯಕ್ರಮದಲ್ಲಿ “ರಾಷ್ಟ್ರ ಧ್ವಜಾರೋಹಣ” ನೆರವೇರಿಸಿ “ತ್ರಿವರ್ಣ ಧ್ವಜ”ಕ್ಕೆ ಗೌರವ ವಂದನೆ ಸಲ್ಲಿಸಿದರು ಈ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರವು ಹಲವಾರು ಜನಪರ ಕಾರ್ಯಕ್ರಮಗಳು ತಂದಿದ್ದು ಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ಬದಲಿಸಿವೆ. ಪ್ರಜಾಸೇವೆ ಇಲಾಖೆ, ಯುವ ಪೀಳಿಗೆ ಸಂಘಟನೆಗೆ ಭಾರತ್ ಜೋಡೋ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯಾದ್ಯಂತ 10,000 ಭಾರತ್ ಜೋಡೋ ಯುವಕರ ಸಂಘ ಸ್ಥಾಪನೆ ಮಾಡಲಾಗುವುದು. ಪ್ರತಿ ಸಂಘಕ್ಕೆ 10 ಲಕ್ಷ ರೂಪಾಯಿಯಂತೆ 1000 ಕೋಟಿ ರೂ ಖರ್ಚು ಮಾಡಲಾಗುತ್ತಿದೆ ಎಂದರು.
ದೇವನಹಳ್ಳಿಯ ಟೌನ್ ಕ್ರೀಡಾಂಗಣಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ವಿಜಯಪುರ ರಸ್ತೆಯಲ್ಲಿರುವ ಕ್ರೀಡಾಂಗಣವನ್ನು ಸಂಸದರಾದ ಡಾ.ಕೆ ಸುಧಾಕರ್ ಅವರು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದು ವರ್ಷದೊಳಗೆ ಎರಡು ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗುವುದು. ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿ ಬಳಿಯ ಜಿಲ್ಲಾ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಮಳೆ ಅಭಾವದಿಂದ ಜಿಲ್ಲೆಯಲ್ಲಿ ಬರಗಾಲ ಉಂಟಾಗುವ ಸಂಭವವಿದ್ದು ರೈತರು ಕಡಿಮೆ ಅವಧಿಯ ರಾಗಿ ಬಿತ್ತನೆ ಮಾಡಬೇಕು. ತಪ್ಪದೇ ಎಲ್ಲರೂ ಬೆಳೆ ವಿಮೆ ಮಾಡಿಸಿ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಅಗತ್ಯ ದಾಸ್ತಾನು ಇದ್ದು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.

2027 ಅಂತ್ಯದೊಳಗೆ ಎತ್ತಿನಹೊಳೆ ನೀರು
ಮನೆ ಮುಖ್ಯಮಂತ್ರಿಗಳು ಮಾಲೂರುನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿರುವಂತೆ ಎತ್ತಿನಹೊಳೆ ನೀರು, ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಹಾಗೂ ಕೋಲಾರಕ್ಕೆ 2027ರ ಅಂತ್ಯದೊಳಗೆ ಹರಿಸಲಾಗುವುದು ಎಂದಿದ್ದಾರೆ. ಹಾಸನ ಭಾಗದಲ್ಲಿ ನೀರಿದ್ದು, ಯಾವುದೇ ಸಮಸ್ಯೆಯಿಲ್ಲ, ಕಾಮಗಾರಿ ಭರದಿಂದ ಸಾಗಿದೆ. ಮೊದಲ ಹಂತವಾಗಿ ಕುಡಿಯುವ ನೀರು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆ, ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಸಿಎಸ್ಆರ್ ಅನುದಾನ, ಸರ್ಕಾರದ ಅನುದಾನದಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
*ಪ್ರಸಕ್ತ ಸಾಲಿನಲ್ಲಿ ಮೆಟ್ರೋ ಕಾಮಗಾರಿ ಆರಂಭ*
ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ 40-50 ವರ್ಷ ಬಾಳಿಕೆ ಬರುವ ಕಾಂಕ್ರೀಟ್ ರೋಡ್, ನಾಲ್ಕು ತಾಲೂಕುಗಳಲ್ಲಿ ಭೂಗತ ವಿದ್ಯುತ್ ಅಳವಡಿಕೆ, ಒಳಚರಂಡಿ ವ್ಯವಸ್ಥೆ (ಯುಜಿಡಿ) ಮಾಡಲಾಗುತ್ತಿದೆ. ನೆಲಮಂಗಲ, ಹೊಸಕೋಟೆ, ದೇವನಹಳ್ಳಿಗೆ ಈ ವರ್ಷದಲ್ಲಿ ಮೆಟ್ರೋ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಅಧಿವೇಶನ ಮುಗಿದ ನಂತರ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಪಂಚಾಯಿತಿ ವಾರು ಭೇಟಿ ನೀಡಿ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಲಿದ್ದೇನೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಧಿ, ಜನಪ್ರತಿನಿಧಿಗಳು, ನಿಮ್ಮೆಲ್ಲರ ಸಹಕಾರ ಅಗತ್ಯ
*ಆಕರ್ಷಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು*
ಜಿಲ್ಲೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆಸಿದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಕಣ್ಮನ ಸೆಳೆದಿದ್ದು ವಿಶೇಷವಾಗಿತ್ತು.
ಜಿಲ್ಲೆಯಲ್ಲಿ ಅಂಗಾಂಗ ದಾನ ಮಾಡಿದ 06 ಮೃತರ ಕುಟುಂಬದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ಕೆ.ಎನ್ ಅನುರಾಧ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವಾಸಂತಿ ಅಮರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಜಗನ್ನಾಥ, ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
