
ವಾಲ್ಮೀಕಿ ರಾಮಾಯಣವು ಪ್ರಾಚೀನ ಭಾರತದ ಸಂಸ್ಕೃತಿ, ಧರ್ಮ, ರಾಜನೀತಿ, ಕುಟುಂಬ ವ್ಯವಸ್ಥೆ, ಪ್ರಕೃತಿ ಸೌಂದರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಪರಿಚಯಿಸುವ ಮಹಾಕಾವ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ರಾಮಾಯಣ ಮಹಾಕಾವ್ಯ ಒಂದು ಭಾವನಾಪ್ರಧಾನ ಕೃತಿಯಾಗಿದೆ. ಭಾರತೀಯ ಭಾಷೆಗಳಿಗೆ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯ ಉಂಟು ಮಾಡಿದ ಪ್ರೇರಣೆ ಮತ್ತು ಪ್ರಭಾವ ಅನನ್ಯವಾದುದು.
ರಾಮಾಯಣ ಕಾವ್ಯ ಓದು ನಿರಂತರವಾಗಿದೆ. ಭಾರತ ದೇಶದ ನದಿ, ವನ, ಪರ್ವತಗಳ ವರ್ಣನೆ ಪರಿಸರವನ್ನು ಪರಿಚಯಿಸುತ್ತದೆ. ವಿವಿಧಗಳು ಪಾತ್ರಗಳು ಮತ್ತು ಸನ್ನಿವೇಶಗಳು ಭಾರತದ ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ವಿಶ್ಲೇಷಣೆ ಮಾಡುತ್ತವೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ರಾಮಾಯಣ ಕಾವ್ಯದಲ್ಲಿ ಬರುವ ಪಾತ್ರಗಳ ಮೂಲಕ ಮಾನವೀಯ ಸಂಬಂಧಗಳು ಮತ್ತು ನೈತಿಕ ಸಂಘರ್ಷಗಳನ್ನು ವಾಲ್ಮೀಕಿ ಮಹರ್ಷಿಗಳು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ರಾಮಾಯಣ ಕಾವ್ಯ ಶತಶತಮಾನಗಳಿಂದ ಭಾರತೀಯರ ಮನ್ನಣೆಗೆ ಪಾತ್ರವಾಗಿದೆ. ವಾಲ್ಮೀಕಿಯ ವಿದ್ವತ್ತಿಗೆ ಜನಮನ್ನಣೆ ದೊರೆತಿದೆ. ವಾಲ್ಮೀಕಿಯ ಸೃಜನಶೀಲತೆ ಮತ್ತು ಕಲಾತ್ಮಕತೆಯ ಪ್ರಭಾವದಿಂದಾಗಿ ಭಾರತೀಯ ಭಾಷೆಗಳಲ್ಲಿ ರಾಮಾಯಣ ಕೃತಿಗಳು ರಚನೆಗೊಂಡಿವೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಜಿಲ್ಲಾಧ್ಯಕ್ಷ ಮುನಿಪಾಪಣ್ಣ, ದೊಡ್ಡಬಳ್ಳಾಪುರ ತಾಲ್ಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿಗಳಾದ ಸಫೀರ್, , ರಂಗಸ್ವಾಮಯ್ಯ, ಕೋದಂಡರಾಮ್, ಅಣ್ಣಯ್ಯ, ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟರೆಡ್ಡಿ, ಲಾವಣ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜ್, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ವೆಂಕಟರಾಜು, ಶ್ರೀನಿವಾಸಲು ಮುಂತಾದವರು ಭಾಗವಹಿಸಿದ್ದರು




