
ದೊಡ್ಡಬಳ್ಳಾಪುರ : ದಲಿತರ ಮುಖಂಡ, ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾದ ಸಿ.ಗುರುರಾಜಪ್ಪ ಅವರು ಅಕಾಲಿಕ ಮರಣ ಹೊಂದಿದ್ದಾರೆ.
ಧರ್ಮಸ್ಥಳದ ಶ್ರೀಮುಡಿ ಭವನದ ವರಾಂಡದಲ್ಲಿ 55 ವರ್ಷದ ಅಪರಿಚಿತ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ ಕಛೇರಿಪಾಳ್ಯದ ಗುರುರಾಜಪ್ಪ ಎಂದು ಗುರುತಿಸಲಾಗಿದೆ.
ದಲಿತ, ಕನ್ನಡ ಮತ್ತು ಪ್ರಗತಿಪರ ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಗುರುರಾಜಪ್ಪ ಅವರ ದೇಹ ಮೃತಪಟ್ಟ ಸ್ಥಿತಿಯಲ್ಲಿ ಧರ್ಮಸ್ಥಳದಲ್ಲಿ ಪತ್ತೆಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಅನಾರೋಗ್ಯ ಅಥವಾ ಇತರ ಕಾರಣದಿಂದ ಮಲಗಿದ್ದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ದೊಡ್ಡಬಳ್ಳಾಪುರದ ಕಛೇರಿಪಾಳ್ಯದ ನಿವಾಸಿಯಾಗಿರುವ ಗುರುರಾಜಪ್ಪ ಅವರು ಗುರುವಾರ ತಮ್ಮ ಬೈಕ್ ತೆಗೆದುಕೊಂಡು ಹೋದವರು, ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು, ಇಂದು ಬೆಳಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿಲು ಕುಟುಂಬಸ್ಥರು ಹೋದಾಗ, ಧರ್ಮಸ್ಥಳಧಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಮಾಹಿತಿ ಬಂದಿದೆ, ಮೃತ ದೇಹದ ಭಾವಚಿತ್ರ ಹೋಲಿಕೆಯಾದ ಕಾರಣ ಮೃತರು ಗುರುರಾಜಪ್ಪ ಎಂದು ತಿಳಿದು ಬಂದಿರುವುದಾಗಿ ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ, ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿದು ಬರಲಿದೆ.
ಗುರುರಾಜಪ್ಪ ಅವರ ಅಕಾಲಿಕ ಸಾವಿಗೆ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ರಮೇಶ್, ಗೌರವ ಅಧ್ಯಕ್ಷ ತಿಮ್ಮರಾಯಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೋ.ಚಂದ್ರಪ್ಪ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಅಂಜನೇಯ, ಮುಖಂಡರಾದ ರಾಜುಸಣ್ಣಕ್ಕಿ, ಛಲವಾದಿ ಸುರೇಶ್, ತಳಗವಾರ ಪುನೀತ್, ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಗುರುರಾಜಪ್ಪ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.




