
ದೊಡ್ಡಬಳ್ಳಾಪುರ: 560ಕ್ಕೂ ಹೆಚ್ಚು ಸಂಸ್ಥಾನಗಳು ಪ್ರತ್ಯೇಕ ಆಡಳಿತ ವ್ಯವಸ್ಥೆ ಹೊಂದಿದ್ದವು. ಅವುಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸುವುದು ದೊಡ್ಡ ಸವಾಲಾಗಿತ್ತು. ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ದೂರದೃಷ್ಟಿ, ರಾಜತಾಂತ್ರಿಕ ನಡೆ ಹಾಗೂ ದೃಢ ನಿರ್ಧಾರಗಳ ಮೂಲಕ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತದ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದರು ಎಂದು ಪ್ರಾಂಶುಪಾಲ ಪ್ರಸಾದ್ ತಿಳಿಸಿದರು.
ನಗರದ ಕೊಂಗಾಡಿಯಪ್ಪ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಏಕತೆ, ಸಮಗ್ರತೆಯನ್ನು ಕಾಪಾಡಲು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಭಾರತ ಸ್ವಾತಂತ್ರ್ಯ ಗಳಿಸಿದರೂ 560 ಸಂಸ್ಥಾನಗಳಲ್ಲಿ ಇನ್ನೂ ರಾಜಶಾಹಿ ವಿಜೃಂಭಿಸುತ್ತಿತ್ತು. ಇವರು ಭಾರತಕ್ಕೆ ಸೇರಲು ಸುತಾರಾಂ ಒಪ್ಪಲಿಲ್ಲ. ಸರ್ದಾರ್ ಸಾಮದಾನ ಭೇದ, ದಂಡೋಪಾಯಗಳ ಮೂಲಕ ಏಕತೆಯನ್ನು ಸಾಧಿಸಿದರು. ಇಂದು ನಾವು ಮುಕ್ತರಾಗಿದ್ದೇವೆ. ಇದು ಹಲವು ಧೀಮಂತರ ಫಲ ಎಂಬುದನ್ನು ಮರೆಯಬಾರದು ಎಂದರು.
ಏಕತೆ ಇರುವುದಲ್ಲ. ಆಗುವುದು, ಇಂದು ಧರ್ಮ, ಜಾತಿ, ಹಂತಸ್ತು, ಅಧಿಕಾರ ದ ಆಧಾರದ ಮೇಲೆ ಒಡಕನ್ನು ಮೂಡಿಸಲಾಗುತ್ತಿದೆ. ಹಲವು ಪಕ್ಷಗಳು ಈ ಭೇದವನ್ನೇ ಬಂಡವಾಳ ಮಾಡಿಕೊಳ್ಳುತ್ತಿವೆ. ಇದನ್ನು ಅಳಿಸಿ ಹಾಕಲು ಏಕತೆ ನಮ್ಮ ಮಾತು ಮತ್ತು ನಡವಳಿಕೆಯಾಗಬೇಕು . ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯ ಬೆಳೆಸುವ ಬದಲು ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಹೋದರತ್ವದ ಭಾವನೆ ಬೆಳೆಸಿಕೊಳ್ಳಬೇಕು. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಕನ್ನಡ ಅಧ್ಯಾಪಕ ಕೆ. ವೆಂಕಟೇಶ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಏಕತಾ ಪ್ರಮಾಣ ವಚನ ಸ್ವೀಕರಿಸಿದರು.
“ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ ಮತ್ತು ನನ್ನ ಸಹವರ್ತಿ ನಾಗರಿಕರಲ್ಲಿ ಈ ಸಂದೇಶವನ್ನು ಹರಡಲು ಶ್ರಮಿಸುತ್ತೇನೆ ಎಂದು ನಾನು ಗಂಭೀರವಾಗಿ ಪ್ರತಿಜ್ಞೆ ಮಾಡುತ್ತೇನೆ.
ಸರ್ದಾರ್ ವಲ್ಲಭಭಾಯಿ ಪಟೇಲರ ದೂರದೃಷ್ಟಿ ಮತ್ತು ಅವರ ಕಾರ್ಯಗಳಿಂದ ಸಾಧ್ಯವಾದ ನನ್ನ ದೇಶದ ಏಕೀಕರಣದ ನೈಜ ಮನೋಭಾವದಿಂದ ನಾನು ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನನ್ನದೇ ಆದ ಕೊಡುಗೆಯನ್ನು ನೀಡಲು ನಾನು ಪ್ರಾಮಾಣಿಕವಾಗಿ ನಿರ್ಧರಿಸುತ್ತೇನೆ.” ಎಂದು ಉದ್ಘೋಷಿಸಿದರು.
ಈ ಸಂದರ್ಭದಲ್ಲಿ ಅಧ್ಯಾಪಕರಾದ ಪ್ರಮೊದ್, ಲಕ್ಷ್ಮೀಕಾಂತ, ವೆಂಕಟೇಶ್, ತೇಜಸ್ವಿನಿ, ರಶ್ಮಿ ನಾಯಕ್ ಮತ್ತು ಮೇಘನಾ ಹಾಜರಿದ್ದರು.




