
ದೊಡ್ಡಬಳ್ಳಾಪುರ: ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಸಂಶೋಧನಾರ್ಥಿ, ದೊಡ್ಡಬಳ್ಳಾಪುರ ತಾಲೂಕಿನ ಏಕಾಶಿಪುರ ಗ್ರಾಮದ ಶಶಿಕಲಾ ಐ.ಎಂ. ಅವರು ಡಾಕ್ಟರೇಟ್ (ಪಿಎಚ್.ಡಿ.) ಪದವಿಗೆ ಭಾಜನರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಏಕಾಶಿಪುರ ಗ್ರಾಮದ ದಿವಂಗತ ರವಿಕುಮಾರ್ ಅವರ ಧರ್ಮಪತ್ನಿಯಾಗಿರುವ ಶಶಿಕಲಾ ಐ.ಎಂ. ಅವರು ದಿವಂಗತ ಮಂಜುನಾಥ್ ಎಂ. ಮತ್ತು ರತ್ನಮ್ಮ ದಂಪತಿಯ ಪುತ್ರಿಯಾಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ಪ್ರಾಧ್ಯಾಪಕರು, ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಣ ನಿಖಾಯದ ಡೀನ್ ಆಗಿರುವ ಡಾ. ನಾರಾಯಣಸ್ವಾಮಿ ಎಂ. ಅವರ ಮಾರ್ಗದರ್ಶನದಲ್ಲಿ “ಪ್ರೌಢಶಾಲಾ ಶಿಕ್ಷಕರ ಬೋಧನಾ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಅವರ ಮಾನಸಿಕ ಆರೋಗ್ಯ, ಸ್ವಯಂ-ದಕ್ಷತೆ ಹಾಗೂ ಶಾಲಾ ಪರಿಸರದ ಪ್ರಭಾವ: ಒಂದು ಅಧ್ಯಯನ” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಡಿಸಿದ್ದರು.
ಇವರ ಸಂಶೋಧನಾ ಮಹಾಪ್ರಬಂಧವನ್ನು ಪರಿಗಣಿಸಿದ ಬೆಂಗಳೂರು ವಿಶ್ವವಿದ್ಯಾಲಯವು ಶಶಿಕಲಾ ಐ.ಎಂ. ಅವರಿಗೆ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಶಶಿಕಲಾ ಐ.ಎಂ. ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ಗುರುಹಿರಿಯರು, ಸ್ನೇಹಿತರು ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಸುತ್ತಮುತ್ತಲಿನ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.




