ದೊಡ್ಡಬಳ್ಳಾಪುರ : ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ್ ಖಂಡ್ರೆ ರವರನ್ನು ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿ ಇತರೆ ನಮ್ಮ ಸಮಾಜದ ಸೂಕ್ತ ಶಾಸಕರಿಗೆ ಸಚಿವ ಸ್ಥಾನ ನೀಡಿ ರಾಜ್ಯದ ವೀರಶೈವ ಲಿಂಗಾಯತ ಸಮಾಜವನ್ನ ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ಸಮಸ್ತ ವೀರಶೈವಲಿಂಗಾಯತ ಸಮಾಜ ಆಗ್ರಹಿಸುತ್ತಿದೆ ಎಂದು ಅಖಿಲ ಭಾರತ ವೀರಶೈವಲಿಂಗಾಯತ ಸಮಾಜ ಬೆಂಗಳೂರು ಗ್ರಾಮಾಂತರ ಯುವಘಟಕದ ಜಿಲ್ಲಾಧ್ಯಕ್ಷ ಲೋಕೇಶ್ ನಾಗಸಂದ್ರ ಒತ್ತಾಯಿಸಿದರು.

ಈ ಕುರಿತು ಮಾತನಾಡಿರುವ ಅವರು ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದ್ದು ಸಚಿವ ಸಂಪುಟ ಪುನರ್ ರಚನೆಯಾಗುತ್ತಿದೆ ಈ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ರಾಜಕಾರಣದಲ್ಲಿ ಸಕ್ರಿಯರಾಗಿರುವ ಈಶ್ವರ್ ಖಂಡ್ರೆ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಗಳಾಗಿ ನೇಮಕಮಾಡಬೇಕು ಎಂಬುದು ಭಾರತ ವೀರ ಶೈವಲಿಂಗಾಯತ ಸಮಾಜ ಆಶಿಸುತ್ತದೆ ಎಂದರು.
ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದ ಚುಕ್ಕಾಣಿ ಇಡಿಯುವ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ ಪಾತ್ರವಹಿಸುತ್ತದೆ ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ಪ್ರಮುಖರು ಈ ಅಂಶವನ್ನು ಗಮನದಲ್ಲಿ ಇರಿಸಿ ನಮ್ಮ ಸಮುದಾಯದ ನಾಯಕರಾದ ಈಶ್ವರ್ ಖಂಡ್ರೆ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಘೋಷಣೆ ಮಾಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
