ಬೆಂಗಳೂರು:ವಿಕಾಸ್ಶೀಲ್ ಇನ್ಸಾನ್ ಪಾರ್ಟಿ (VIP) ಕರ್ನಾಟಕ ರಾಜಕಾರಣದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಮುಂದಾಗಿದ್ದು, ಮುಂಬರುವ ಚುನಾವಣೆಯಲ್ಲಿ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ “ಉತ್ತರ ಭಾರತೀಯ ಮಿಲನ ಸಮಾರೋಪ” ಕಾರ್ಯಕ್ರಮದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖ ಮುಖಂಡರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
*2.5 ಕೋಟಿಗೂ ಅಧಿಕ ಹಿಂದುಳಿದ ವರ್ಗಗಳ ಒಗ್ಗಟ್ಟು*
ಪಕ್ಷದ ಪ್ರಮುಖರು ಮಾತನಾಡಿ, “ಕಳೆದ 20 ವರ್ಷಗಳಿಂದ ವಿಐಪಿ ಪಕ್ಷಕ್ಕೆ ಉತ್ತರ ಭಾರತದಾದ್ಯಂತ ಹಾಗೂ ವಿವಿಧ ರಾಜ್ಯಗಳಲ್ಲಿ ಉತ್ತಮ ಬೆಂಬಲವಿದೆ. ನಾವು ‘ನಿಷಾದ್ ಸಮಾಜ’ಕ್ಕೆ ಸೇರಿದವರಾಗಿದ್ದು, ದೇಶಾದ್ಯಂತ ನಮ್ಮ ಸಮಾಜದ ಜನಸಂಖ್ಯೆ ಸುಮಾರು 23 ಕೋಟಿಯಷ್ಟಿದೆ. ಕರ್ನಾಟಕದಲ್ಲಿ ಉತ್ತರ ಭಾರತೀಯರು ಹಾಗೂ ಅತ್ಯಂತ ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಯೆ 2.5 ಕೋಟಿಗೂ ಹೆಚ್ಚಾಗಿದೆ. ಈ ಎಲ್ಲಾ ಸಮಾಜದ ಬಾಂಧವರು ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಡಲಿದ್ದು, ಕನಿಷ್ಠ 50 ಕ್ಷೇತ್ರಗಳಲ್ಲಿ ಗೆದ್ದು ಬರಲಿದ್ದೇವೆ” ಎಂದು ಭರವಸೆ ನೀಡಿದರು.
*ನವೆಂಬರ್ನಲ್ಲಿ ಬೃಹತ್ ಸಮಾವೇಶದ ಯೋಚನೆ*:
ಕರ್ನಾಟಕಕ್ಕೆ ವಿಐಪಿ ಪಕ್ಷ ಪ್ರವೇಶಿಸಿ ಎರಡು ತಿಂಗಳು ಕಳೆದಿದ್ದು, ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಜಿಲ್ಲಾಧ್ಯಕ್ಷರು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಸಂಘಟನಾತ್ಮಕ ಕಾರ್ಯಗಳು ಪೂರ್ಣಗೊಂಡ ನಂತರ, ಮುಂಬರುವ ನವೆಂಬರ್ ತಿಂಗಳಿನಲ್ಲಿ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಇಡೀ ರಾಜ್ಯ ಸರ್ಕಾರ ಮತ್ತು ಇತರ ರಾಜಕೀಯ ಪಕ್ಷಗಳು ತಿರುಗಿ ನೋಡುವಂತಹ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ಮುಖಂಡರು ತಿಳಿಸಿದರು.
*ಇತರ ಪಕ್ಷಗಳಿಗೆ ರಾಜೀನಾಮೆ ನೀಡಿ ವಿಐಪಿಗೆ ಬನ್ನಿ”**:
ಇತರ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆಯೇ ಹೊರತು ಅವರಿಗೆ ಸೂಕ್ತ ರಾಜಕೀಯ ಅಧಿಕಾರ ನೀಡುತ್ತಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. “ಇತರ ಪಕ್ಷಗಳಲ್ಲಿ ಗುರುತಿಸಿಕೊಳ್ಳದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ನಮ್ಮ ಸಮಾಜದ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ವಿಐಪಿ ಪಕ್ಷವನ್ನು ಸೇರಬೇಕು. ಉತ್ತರ ಭಾರತೀಯರು ಈ ನಾಡಿನಲ್ಲಿ ಒಂಟಿಯಲ್ಲ, ವಿಐಪಿ ಪಕ್ಷ ಸದಾ ನಿಮ್ಮೊಂದಿಗಿರುತ್ತದೆ. ನಮ್ಮ ಹಕ್ಕನ್ನು ನಾವೇ ಪಡೆದು, ಅಧಿಕಾರದ ಚುಕ್ಕಾಣಿ ಹಿಡಿಯುವ ಕಾಲ ಬಂದಿದೆ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಶಾಂತ್ ಎ.ಹೆಚ್.ರಾಜ್ಯ ಪ್ರಧಾನ ಕಾರ್ಯದರ್ಶಿ, ಸೋನಾಲಿ ಕೆ. ಪೋವಯ್ಯ – ಬೆಂಗಳೂರು ಘಟಕದ ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷೆ, ರಾಮಂಜಪ್ಪ ಬಿ. ಕೆ. ರಾಜ್ಯ ಖಜಾಂಚಿ,ಶಾಂತಪ್ಪ ಕೂಡಿ – ಕಲಬುರಗಿ ಜಿಲ್ಲಾ ಅಧ್ಯಕ್ಷ, ಶ್ರೀಮತಿ ವಿ. ಮಾಲತಿ – ರಾಜ್ಯ ಹಿಂದುಳಿದ/ಅತ್ಯಂತ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷೆ ಉಪಸ್ಥಿತರಿದ್ದರು.
