ದೊಡ್ಡಬಳ್ಳಾಪುರ : ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಗಂಧದ ಮರ ಕಳ್ಳತನ ಪ್ರಕರಣವನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಭೇದಿಸಿದ್ದಾರೆ ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು ₹30 ಲಕ್ಷಕ್ಕೂ ಅಧಿಕ ಮೌಲ್ಯದ 254 ಕೆ.ಜಿ. ಗಂಧದ ಮರದ ತುಂಡುಗಳು, ಕೃತ್ಯಕ್ಕೆ ಬಳಸಿದ್ದ ಪೆಟ್ರೋಲ್ ಚಾಲಿತ ಗರಗಸ ಹಾಗೂ ಒಂದು ಸ್ಯಾಂಟ್ರೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಮೈಸೂರು ಮೂಲದ ವೆಂಕಟೇಶ್ (26) ಹಾಗೂ ತುಮಕೂರು ಮೂಲದ ಅರುಣ್ (34) ಎಂದು ಗುರುತಿಸಲಾಗಿದೆ. ಇಬ್ಬರೂ ಬಿದಿರು ಬುಟ್ಟಿ ತಯಾರಿಕೆ ಕೆಲಸ ಮಾಡುತ್ತಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವೆಂಕಟೇಶ್ ವಿರುದ್ಧ ಈ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.
ಜೂನ್ 13ರಂದು ಮಧ್ಯರಾತ್ರಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಛೇರಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಒಂದು ಗಂಧದ ಮರ ಹಾಗೂ ದರ್ಗಾ ಮೊಹಲ್ಲಾದ ಸ್ಮಶಾನದ ಆವರಣದಲ್ಲಿದ್ದ ಮತ್ತೊಂದು ಗಂಧದ ಮರವನ್ನು ಕಳ್ಳರು ಕಡಿದು ಕಳವು ಮಾಡಿದ್ದರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಚಲನವಲನಗಳನ್ನು ಪತ್ತೆಹಚ್ಚಿದರು. ಕಳವು ಮಾಡಿದ್ದ ಗಂಧದ ಮರದ ತುಂಡುಗಳನ್ನು ಸ್ಯಾಂಟ್ರೋ ಕಾರಿನಲ್ಲಿ ಸಾಗಿಸಿ ಕುರುಬರಹಳ್ಳಿ ಸಮೀಪ ಅಡಗಿಸಿಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸೂಕ್ತ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 254 ಕೆ.ಜಿ. ಗಂಧದ ಮರದ ತುಂಡುಗಳು, ಪೆಟ್ರೋಲ್ ಚಾಲಿತ ಗರಗಸ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಚಂದ್ರಕಾಂತ್ ಎಂ.ವಿ, ಐ.ಪಿ. ಸೂಚನೆಯಂತೆ ಬೆಂಗಳೂರು ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕರಾದ ವೆಂಕಟಪ್ರಸನ್ನ ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಿನಾರಾಯಣ,ರವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಾಂಡುರಂಗ ರವರ ನೇತೃತ್ವದ ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆಯ ಪ್ರಭಾರ ಪೋಲಿಸ್ ಇನ್ಸ್ಪೆಕ್ಟರ್ ಹೆಚ್.ಮುತ್ತುರಾಜು ಮತ್ತು ಸಿಬ್ಬಂದಿಗಳಾದ ಎ ಎಸ್ ಐ ಕೃಷ್ಣಮೂರ್ತಿ, ಪಾಂಡುರಂಗ, ಹುಸೇನ್ ಸಾಬ್, ಶಿವಾನಂದ, ಪ್ರದೀಪ್, ಮುನಿರಾಜು, ರೂಪೇಶ್ ಯಾದವ್, ರೇಖಾ ರವರುಗಳ ತಂಡದ ಕಾರ್ಯವೈಖರಿಯನ್ನು ಕೇಂದ್ರ ವಲಯದ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು ಶ್ಲಾಘಿಸಿದ್ದು, ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.
