ದೊಡ್ಡಬಳ್ಳಾಪುರ : ಭಾನುವಾರ (ಜೂ. 21) ಸಂಜೆ 6.30 ಕ್ಕೆ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ 2026-27 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಆಯೋಜನೆ ಮಾಡಿದ್ದು ನೂತನ ಪದಾಧಿಕಾರಿಗಳನ್ನು ಒಳಗೊಂಡಂತೆ 50 ಜನರ ತಂಡ ಈ ಕಾರ್ಯಕ್ರಮದಲ್ಲಿ ಪದಗ್ರಹಣದ ಮೂಲಕ ಪದವಿ ಪಡೆಯಲಿದ್ದಾರೆ ಎಂದು ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರದ ಸಲಹೆಗಾರರಾದ ಹುಲಿಕಲ್ ನಟರಾಜ್ ತಿಳಿಸಿದರು.
ನಗರದ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು ಪ್ರತಿ ವರ್ಷ ಜೂನ್ 30ಕ್ಕೆ ಕ್ಲಬ್ ನ ಪದಾಧಿಕಾರಿಗಳ ಅಧಿಕಾರ ಮುಗಿದು ಜುಲೈ 1 ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವುದು ವಾಡಿಕೆ 2026-27 ನೇ ಸಾಲಿಗೆ ನಮ್ಮ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರದ 54ನೇ ಅಧ್ಯಕ್ಷರಾಗಿ ಲಯನ್ ಎಲ್. ಎನ್. ವಸುಂಧರಾದೇವಿ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದರು.
ಇಂಟರ್ ನ್ಯಾಶನಲ್ ಲಯನ್ಸ್ ಕ್ಲಬ್ ಅಂಗ ಸಂಸ್ಥೆಯಾದ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ 1971-72 ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು ಅಂದಿನಿಂದಲೂ ಉಚಿತ ಕಣ್ಣು ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ, ಆರೋಗ್ಯ ಶಿಬಿರ, ಶೈಕ್ಷಣಿಕ, ರಾಸುಗಳ ಶಿಬಿರ, ಪರಿಸರ ರಕ್ಷಣೆ, ಉಚಿತ ಕಂಪ್ಯೂಟರ್ ಶಿಕ್ಷಣ, ರೈತರ ಸಮಾವೇಶ, ಉಚಿತ ಡಯಾಲಿಸಿಸ್, ಮುಂತಾದ ಶೈಕ್ಷಣಿಕ ಸಾಮಾಜಿಕ ಸೇವೆಗಳನ್ನು ಅವಿರತವಾಗಿ ನಡೆಸಿಕೊಂಡು ಬಂದಿದೆ ರಾಜ್ಯದಲ್ಲಿಯೇ ಉತ್ತಮವಾದ ಸೇವೆ ಸಲ್ಲಿಸುತ್ತಾ ನಮ್ಮ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಪ್ರಥಮ ಶ್ರೇಣಿಯಲ್ಲಿದೆ ಎಂದರು.
34,500 ಮಂದಿಗೆ ಉಚಿತ ಡಯಾಲಿಸಿಸ್ ಸೇವೆ
ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ (ರಿ) ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಹಯೋಗದಲ್ಲಿ ವತಿಯಿಂದ ನಡೆಯುತ್ತಿರುವ ಡಯಾಲಿಸಿಸ್ ಆಸ್ಪತ್ರೆಯಲ್ಲಿ ಪ್ರತಿ ನಿತ್ಯ 12 ರಿಂದ 18 ಮಂದಿ ಉಚಿತ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಈಗಾಗಲೇ 34,500 ಮಂದಿಗೆ ಡಯಾಲಿಸಿಸ್ ಮಾಡಿಸಲಾಗಿದೆ. ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವ ನೂರಾರು ರೋಗಿಗಳಿಗೆ ನಮ್ಮ ದೊಡ್ಡಬಳ್ಳಾಪುರದಲ್ಲಿ ಉತ್ತಮ ಡಯಾಲಿಸಿಸ್ ಸೇವೆ ಒದಗಿಸಲಾಗುತ್ತಿದೆ ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಪಡಿಸಿಕೊಳ್ಳಬೇಕು ಎಂದರು.
62,400 ಜನರಿಗೆ ಕಣ್ಣಿನ ತಪಾಸಣೆ
ಕಳೆದ 53 ವರ್ಷದಿಂದ ನಿರಂತರವಾಗಿ ಪ್ರತೀ ಗುರುವಾರ 100 ರಿಂದ 120 ಜನರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಗಿದ್ದು ಪ್ರತೀ ತಿಂಗಳ ಮೊದಲನೇ ಸೋಮವಾರ ಸರಾಸರಿ 75 ರಿಂದ 100 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಐ ಒ ಎಲ್ ಚಿಕಿತ್ಸೆ ಮಾಡಿಸಲಾಗಿದೆ. ಪ್ರತೀ ಬುಧವಾರ ಸರಾಸರಿ 62,400 ಜನರಿಗೆ ಕಣ್ಣಿನ ತಪಾಸಣೆ ಮಾಡಲಾಗಿದೆ.
ಭಾನುವಾರ ಸಂಜೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಲಯನ್ ವಸುಂದರಾದೇವಿ, ನೂತನ ಕಾರ್ಯದರ್ಶಿಯಾಗಿ ಲಯನ್ ರೇಖಾ ವೆಂಕಟೇಶ್, ಖಜಾಂಚಿಯಾಗಿ ಲಯನ್ ನಿಖಿಲಾ, ಸಹಕಾರ್ಯದರ್ಶಿಯಾಗಿ ಲಯನ್ ಭಾರತಿ ಮಂಜುನಾಥ್ ಹಾಗೂ 50 ಜನರ ತಂಡ ಪದಗ್ರಹಣದಲ್ಲಿ ಪದವಿ ಪಡೆಯಲಿದ್ದಾರೆ ಎಂದು ತಿಳಿಸಿದರು.
2025-26 ನೇ ಸಾಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರದ ಅಧ್ಯಕ್ಷ ನಂಜುಂಡೇಶ್ವರ ಸ್ವಾಮಿ ಮಾತನಾಡಿ ನಮ್ಮ ಅವಧಿಯಲ್ಲಿ ಹಲವಾರು ರಕ್ತದಾನ ಶಿಬಿರಗಳು ಆರೋಗ್ಯ ತಪಾಸಣಾ ಶಿಬಿರಗಳು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದೇವೆ ನೂತನವಾಗಿ ಪದಗ್ರಹಣ ಪಡೆಯುತ್ತಿರುವ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸುತ್ತೇನೆ ಎಂದರು.
ನೂತನ ಅಧ್ಯಕ್ಷರಾದ ಲಯನ್ ಎಲ್. ಎನ್. ವಸುಂಧರಾದೇವಿ ಮಾತನಾಡಿ ನಮ್ಮ ತಂಡ ಈ ವರ್ಷ ದಾನಿಗಳ ಸಹಾಯದಿಂದ 12 ತಿಂಗಳು ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಐ ಒ ಎಲ್ ಚಿಕಿತ್ಸೆ ಹಾಗೂ ಡಯಾಬಿಟಿಕ್ ತಪಾಸಣಾ ಶಿಬಿರ ಮಾಡಿಸುವ ತೀರ್ಮಾನ ಮಾಡಿದ್ದೇವೆ ಎಲ್ಲಾ ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣೆ ಹಾಗೂ ಸಮಾಜದ ಒಳಿತಿಗಾಗಿ ದುಡಿಯುವ ಪತ್ರಕರ್ತರ ದಿನಾಚರಣೆಯನ್ನು ಆಚರಿಸಬೇಕೆಂಬ ಅಭಿಲಾಷೆ ಹೊಂದಿದ್ದೇವೆ ಎಂದರು.
ಅಲ್ಲದೆ ಪಶು ಆರೋಗ್ಯ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ, ಬೃಹತ್ ಆರೋಗ್ಯ ತಪಾಸಣಾ ಶಿಬಿರಗಳು, 10 ಸಾವಿರ ಮಕ್ಕಳಿಗೆ ದಂತ ತಪಾಸಣಾ ಶಿಬಿರ, 05 ರಕ್ತದಾನ ಶಿಬಿರಗಳು, ಪರಿಸರ ಸಂರಕ್ಷಣೆ, ಹಸಿವು ನಿವಾರಣಾ ಕಾರ್ಯಕ್ರಮ, ಉಚಿತ ನೋಟ್ಸ್ ಪುಸ್ತಕ, ವಿದ್ಯಾರ್ಥಿಗಳಿಗಾಗಿ “ಮೊಬೈಲ್ ಬಿಡಿ- ಪುಸ್ತಕ ಹಿಡಿ” ಅಭಿಯಾನವನ್ನು ವರ್ಷ ಪೂರ್ತಿ ಆಚರಿಸಲಾಗುವುದು ಶಾಲಾ ಮಕ್ಕಳಿಗೆ 1ಲಕ್ಷ ನೋಟ್ ಬುಕ್ ವಿತರಣೆ ಮಾಡುವ ಸಂಕಲ್ಪ ಮಾಡಿದ್ದೇವೆ ಈ ಬಾರಿ ಮಹಿಳಾ ಸಬಲೀಕರಣಕ್ಕಾಗಿ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸುವ ಮೂಲಕ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಈ ವೇಳೆ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
