ಹಿರಿಯ ಗಾಯಕಿ ಎಸ್. ಜಾನಕಿ ಅವರು ಇಂದು (ಜುಲೈ 11) ನಿಧನ ಹೊಂದಿದ್ದಾರೆ. ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಅವರು ಹಾಡಿದ್ದರು. ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಜಾನಕಿ ಅವರು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದು . 1938ರ ಏಪ್ರಿಲ್ 23ರಂದು ಜನಿಸಿದರು. ಅವರು ತೆಲುಗಿನವರು ಹೆಚ್ಚು ಪ್ರಸಿದ್ಧಿ ಪಡೆದು ಕನ್ನಡಿಗರಿಗೆ ತಮ್ಮ ಸಾವಿರಾರು ಸೂಪರ್ ಹಿಟ್ ಹಾಡುಗಳ ಮೂಲಕ ಮನೆಮನಗಳಿಗೆ ಹತ್ತಿರವಾದರು.
ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಇರುವ ಅತಿ ದೊಡ್ಡ ವಿಶೇಷ ಶಕ್ತಿಯೆಂದರೆ ಅದು ಧ್ವನಿ ಬದಲಾವಣೆ . ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಧ್ವನಿಯವರೆಗೆ, ಕೇವಲ ಗಾಯನದ ಮೂಲಕವೇ ನಟನೆಯ ಭಾವನೆಗಳನ್ನು ತರುತ್ತಿದ್ದ ಅದ್ಭುತ ಗಾಯಕಿ ಇವರು. ಕನ್ನಡ ಚಿತ್ರರಂಗದಲ್ಲಿ ಅವರು ಹಾಡಿದ ಗೀತೆಗಳಿಗೆ ಕರ್ನಾಟಕ ಸರ್ಕಾರವು ಹಲವು ಬಾರಿ ‘ಅತ್ಯುತ್ತಮ ಹಿನ್ನೆಲೆ ಗಾಯಕಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಇಷ್ಟೇ ಅಲ್ಲದೆ, ಎಸ್. ಜಾನಕಿ ಅವರಿಗೆ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿ, ಗೌರವ ಡಾಕ್ಟರೇಟ್, ತಮಿಳುನಾಡು ರಾಜ್ಯ ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2013ರಲ್ಲಿ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ.
