ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ): ಸತ್ಯ ಸಾಯಿ ಗ್ರಾಮದ ಪ್ರೇಮಾಮೃತಂ ಸಭಾಂಗಣದಲ್ಲಿ ಇಂದು (ಜುಲೈ 29) ಸಂಜೆ 4 ಗಂಟೆಗೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ (SSSUHE) 5ನೇ ಘಟಿಕೋತ್ಸವ ಅದ್ಧೂರಿಯಾಗಿ ನಡೆಯಲಿದೆ.

ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳೂ ಆಗಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸಾನ್ನಿಧ್ಯ ವಹಿಸಲಿದ್ದು, ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು–ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಘಟಿಕೋತ್ಸವದ ವಿಶೇಷವೆಂದರೆ, ದೇಶದಲ್ಲೇ ಮೊದಲ ಬಾರಿಗೆ 138 ರೈತರಿಗೆ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ ಪ್ರದಾನ ಮಾಡಲಾಗುತ್ತಿದೆ. ಜೊತೆಗೆ, ವಿವಿಧ ವಿಭಾಗಗಳ ಒಟ್ಟು 119 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ.
*7 ಮಂದಿಗೆ ಗೌರವ ಡಾಕ್ಟರೇಟ್*
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿರುವ ಭಾರತರತ್ನ ಪ್ರೊ. ಸಿ.ಎನ್. ರಾವ್ ಹಾಗೂ ಪದ್ಮವಿಭೂಷಣ ಪುರಸ್ಕೃತ ಡಾ. ಆರ್.ಎ. ಮಶೇಲ್ಕರ್, ಕ್ರೀಡೆ ಮತ್ತು ಫಿಟ್ನೆಸ್ ಕ್ಷೇತ್ರದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್, ಸಂಗೀತ ಮತ್ತು ಕಲೆ ಕ್ಷೇತ್ರದಲ್ಲಿ ತಾಳಯೋಗಿ ಪಂಡಿತ್ ಸುರೇಶ್ ತಳವಳ್ಕರ್, ಆರೋಗ್ಯ ಕ್ಷೇತ್ರದಲ್ಲಿ ಡಾ. ಸೌಮ್ಯ ಸ್ವಾಮಿನಾಥನ್, ಶಿಕ್ಷಣ ಕ್ಷೇತ್ರದಲ್ಲಿ ಡಾ. ಇಂದುಮತಿ ರಾವ್ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸಲಹೆಗಾರ ಡಾ. ಜಿ.ವಿ. ಸಿಂಗ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
*14 ಮಂದಿಗೆ ಚಿನ್ನದ ಪದಕ*
ಈ ವರ್ಷದ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ 14 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ. ಒಟ್ಟು 119 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಗುತ್ತದೆ.
*ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿಶೇಷತೆ*
‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್ನ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 2019ರಲ್ಲಿ ಸ್ಥಾಪಿಸಿರುವ ಈ ಖಾಸಗಿ ವಿಶ್ವವಿದ್ಯಾಲಯವು, ಶಿಕ್ಷಣ ಶುಲ್ಕ, ವಸತಿ, ಆಹಾರ ಹಾಗೂ ವಿದ್ಯಾರ್ಥಿಗಳ ದೈನಂದಿನ ಅಗತ್ಯಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತಿರುವ ಭಾರತದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
“ಶಿಕ್ಷಣವು ವ್ಯವಹಾರವಲ್ಲ; ಅದು ಪ್ರತಿಯೊಬ್ಬ ಮಾನವನ ಮೂಲಭೂತ ಹಕ್ಕು” ಎಂಬ ತತ್ವದ ಆಧಾರದ ಮೇಲೆ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ.75ಕ್ಕೂ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಂದ ಬಂದವರಾಗಿದ್ದಾರೆ. ಶೇ.50ಕ್ಕೂ ಹೆಚ್ಚು ವಿದ್ಯಾರ್ಥಿನಿಯರಾಗಿದ್ದು, ಸುಮಾರು ಶೇ.60 ವಿದ್ಯಾರ್ಥಿಗಳು ತಮ್ಮ ಕುಟುಂಬದ ಮೊದಲ ತಲೆಮಾರಿನ ಪದವೀಧರರಾಗಿದ್ದಾರೆ. ಶೇ.65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಕಲಬುರ್ಗಿಯಲ್ಲಿದೆ.

*ಗುರುಕುಲ ಮಾದರಿಯ ಶಿಕ್ಷಣ*
ಪ್ರಾಚೀನ ಭಾರತೀಯ ಗುರುಕುಲ ಶಿಕ್ಷಣ ಪದ್ಧತಿಯನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಪ್ರತಿದಿನ ಪ್ರಾರ್ಥನೆ, ಆತ್ಮಾವಲೋಕನ ಹಾಗೂ ಭಕ್ತಿಪೂರ್ಣ ಸಾಮೂಹಿಕ ಕಾರ್ಯಕ್ರಮಗಳ ಜೊತೆಗೆ ಉನ್ನತ ಮಟ್ಟದ ಶೈಕ್ಷಣಿಕ ಅಧ್ಯಯನಕ್ಕೂ ಸಮಾನ ಮಹತ್ವ ನೀಡಲಾಗುತ್ತದೆ.
ವೇದ ಅಧ್ಯಯನವನ್ನು ಔಪಚಾರಿಕ ಶೈಕ್ಷಣಿಕ ವಿಭಾಗವಾಗಿ ಬೋಧಿಸಲಾಗುತ್ತಿದ್ದು, ವೇದಗಳು, ಭಾರತೀಯ ದಾರ್ಶನಿಕ ಪರಂಪರೆ ಹಾಗೂ ಪ್ರಾಚೀನ ಜ್ಞಾನ ಪದ್ಧತಿಗಳ ಅಧ್ಯಯನದ ಜೊತೆಗೆ ಆಧುನಿಕ ವಿಜ್ಞಾನ, ವೈದ್ಯಕೀಯ, ನಿರ್ವಹಣಾ ಶಾಸ್ತ್ರ ಮತ್ತು ಕೃಷಿ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ.
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ವಿವಿಧ ಹಬ್ಬ-ಹರಿದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಂಯೋಜಿಸಲಾಗಿದೆ. ಶಾಸ್ತ್ರೀಯ ಸಂಗೀತ, ನೃತ್ಯ, ನಾಟಕ ಹಾಗೂ ಜಾನಪದ ಕಲಾ ಪ್ರಕಾರಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದ ಪ್ರಮುಖ ಭಾಗವಾಗಿವೆ.
ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ, ವೇದ ಅಧ್ಯಯನ, ಸಂಗೀತ ಮತ್ತು ಪ್ರದರ್ಶನ ಕಲೆಗಳು, ವೈದ್ಯಕೀಯ, ನರ್ಸಿಂಗ್, ಪ್ಯಾರಾಮೆಡಿಕಲ್ ವಿಜ್ಞಾನ, ಅಲೈಡ್ ಹೆಲ್ತ್ ಸೈನ್ಸಸ್, ಕೃಷಿ, ಎನ್ಜಿಒ ನಿರ್ವಹಣೆ, ಮಾನಸಿಕ ಆರೋಗ್ಯ, ದೈಹಿಕ ಶಿಕ್ಷಣ, ವಿಜ್ಞಾನ, ಕಲೆ ಹಾಗೂ ವೃತ್ತಿಪರ ಕೌಶಲ್ಯಗಳಿಗೆ ಸಂಬಂಧಿಸಿದ ವಿವಿಧ ಕೋರ್ಸ್ಗಳನ್ನು ನಡೆಸಲಾಗುತ್ತಿದೆ.
*ಶೈಕ್ಷಣಿಕ ಸಹಭಾಗಿತ್ವ*
ಅಮೆರಿಕದ ಎಮೋರಿ ವಿಶ್ವವಿದ್ಯಾಲಯ, ಏಮ್ಸ್, ನವದೆಹಲಿ, ಐಐಟಿ ಬಾಂಬೆ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ವಿಶ್ವವಿದ್ಯಾಲಯ ಶೈಕ್ಷಣಿಕ ಸಹಭಾಗಿತ್ವದ ಒಡಂಬಡಿಕೆಗಳನ್ನು ಮಾಡಿಕೊಂಡಿದೆ.
*ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್*
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್ ಜಾಗತಿಕ ಮಾನವೀಯ ಸೇವಾ ಚಳವಳಿಯಾಗಿದ್ದು, 100ಕ್ಕೂ ಹೆಚ್ಚು ದೇಶಗಳಲ್ಲಿ ಉಚಿತ ಶಿಕ್ಷಣ, ಪೌಷ್ಟಿಕಾಂಶ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
