
ದೊಡ್ಡಬಳ್ಳಾಪುರ: ತಾಲ್ಲೂಕಿನ ಕಂಟನಕುಂಟೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್. ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ನಂಜಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಇಬ್ಬರನ್ನೂ ಅವಿರೋಧವಾಗಿ ಆಯ್ಕೆಯಾದವರಾಗಿ ಘೋಷಿಸಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಸದಸ್ಯರು ಮತ್ತು ಮುಖಂಡರು ಅಭಿನಂದಿಸಿದರು.
ಆಯ್ಕೆಯಾದ ಬಳಿಕ ಮಾತನಾಡಿದ ಅಧ್ಯಕ್ಷ ಎಸ್. ವೆಂಕಟೇಶ್, ‘ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘದ ಸದಸ್ಯರು ಮತ್ತು ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿ ಕಾರ್ಯನಿರ್ವಹಿಸಲಾಗುವುದು. ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಬಲಪಡಿಸಿ, ಸದಸ್ಯರಿಗೆ ಉತ್ತಮ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.




