
ದೊಡ್ಡಬಳ್ಳಾಪುರ : ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಕೂಡಲೇ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾರಂಭಿಸಬೇಕು ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ. ಎಸ್. ಚಂದ್ರಶೇಖರ್ ತಿಳಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಹಾಗೂ ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪೋಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಮಸ್ಯೆ ಕುರಿತು 3 ದಿನಗಳ ಧರಣಿ ಮಾಡುವ ಮೂಲಕ ಈಗಾಗಲೇ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದೇವೆ. ಸರ್ಕಾರ ಮಧ್ಯಪ್ರವೇಶಿಸಿ, ಜವಾಬ್ದಾರಿಯನ್ನು ತೆಗೆದುಕೊಂಡು ಆತಂತ್ರದಲ್ಲಿರುವ ವಿದ್ಯಾರ್ಥಿಗಳಿಗೆ ದಾರಿಯಾಗಿ ನ್ಯಾಯ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ನಮ್ಮ ಪ್ರಯತ್ನ ಮುಂದುವರೆದಿದೆ.
ಆದರೆ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ತರಗತಿಯ ಪ್ರತಿನಿಧಿಗಳಿಗೆ ಸಂದೇಶ ಕಳಿಸುವ ಮೂಲಕ ಯಾರು ಪ್ರಶ್ನೆ ಮಾಡಬೇಡಿ ನಾವು ವಿದ್ಯಾ ಸಂಸ್ಥೆಯನ್ನು ಪುನರ್ ತೆರೆಯುತ್ತೇವೆ ಎನ್ನುತ್ತಿದೆ. ಸ್ಥಳೀಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ನಾವು ನಿರಂತರ ಹೋರಾಟ ಮಾಡಿ ಧರಣಿ ಕುಳಿತು ಕೊಳ್ಳುವ ಪರಿಸ್ಥಿತಿ ಇತ್ತು.ಪ್ರಶ್ನೆ ಮಾಡದಿದ್ದರೆ ವಿದ್ಯಾರ್ಥಿಗಳ ಗತಿ ಏನು..?? ಎಂದರು.
ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಬ್ಯಾಂಕಿನ ವಶಕ್ಕೆ ಒಳಪಟ್ಟಿರುವ ವಿಚಾರ ಸರ್ಕಾರದ ಗಮನಕ್ಕೆ ಹೋಗಿಲ್ಲ, ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಸಂಘಟನೆಯಿಂದ ನಿರಂತರವಾಗಿ ನಡೆಯುತ್ತಿದೆ. ಕಾಲೇಜು ಮುಚ್ಚಲ್ಪಟ್ಟು ಎರಡು ತಿಂಗಳುಗಳು ಕಳೆದಿದೆ.ಮಕ್ಕಳ ಶೈಕ್ಷಣಿಕ ಜೀವನ, ಕ್ಲಿನಿಕಲ್ ತರಬೇತಿ, ಇಂಟರ್ನ್ಶಿಪ್, ಪರೀಕ್ಷೆಗಳು, ಪದವಿ ಪೂರ್ಣಗೊಳಿಸುವಲ್ಲಿ ಸಮಸ್ಯೆ ಉಂಟಾಗಿದೆ ಇದನ್ನು ಮನಗಂಡು ಕಾಲೇಜು ಆಡಳಿತ ಮಂಡಳಿ ಕೂಡಲೇ ಕಾಲೇಜು ಪ್ರಾರಂಭಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಡಿಗರ ಕರವೇ ರಾಜ್ಯ ಪ್ರದಾನ ಕಾರ್ಯದರ್ಶಿ ಆರ್. ರಮೇಶ್, ರಾಜ್ಯ ಮುಖಂಡ ಪಿ. ವಾಸು, ಜಿಲ್ಲಾ ಪ್ರದಾನ ಕಾರ್ಯದರ್ಶಿ ತಾಯೇಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ತಾಲೂಕು ಉಪಾಧ್ಯಕ್ಷ ಅಂಬರೀಷ್, ತಾ. ಪ್ರದಾನ ಕಾರ್ಯದರ್ಶಿ ಉದಯ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್ ರೆಡ್ಡಿ, ಸಾಸಲು ಹೋಬಳಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಮುಖಂಡರಾದ ಶಿವಶಂಕರ ಹಾಜರಿದ್ದರು.




