
ದೊಡ್ಡಬಳ್ಳಾಪುರ : ಎ.ಪಿ.ರಂಗನಾಥ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಗೆಲುವಿಗೆ ಹೆಚ್ಚಿನ ಶ್ರಮವಹಿಸಲಾಗುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ನಗರದ ಅರ್ಕಾವತಿ ಬಡಾವಣೆಯಲ್ಲಿನ ಶಾಸಕರ ಧೀರಜ್ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು ರಂಗನಾಥ್ ಅವರು ೩ನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಅವರ ಗೆಲುವಿಗೆ ಉತ್ತಮ ವಾತಾವರಣ ಇದೆ. ಅವರು ಈ ಹಿಂದೆ ಸೋತರು ಕೂಡ ಶಿಕ್ಷಕರ ಪರ ಕೆಲಸ ಮಾಡಿದ್ದಾರೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು ೭೫೦ ಮತದಾರರಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯ ನಗರ ಮತ್ತು ಗ್ರಾಮಾಂತರ ಎರಡು ಮಂಡಲ, ಜೆಡಿಎಸ್ ಮುಖಂಡರು ಸೇರಿ ಜವಾಬ್ದಾರಿ ತೆಗೆದುಕೊಂಡು ಉತ್ತಮ ಚುನಾವಣೆ ಮಾಡುತ್ತೇವೆ. ಚುನಾವಣೆಯಲ್ಲಿ ಎಲ್ಲಾ ತಂತ್ರಗಾರಿಕೆ ಎನ್ಡಿಎ ವತಿಯಿಂದ ಮಾಡಲಾಗುತ್ತದೆ. ರಂಗನಾಥ್ ಅವರು ಶಿಕ್ಷಕರ ಪರ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಎನ್ಡಿಎ ಸಭೆಯಲ್ಲಿ ಚುನಾವಣೆಯ ಬಗ್ಗೆ ಪಕ್ಷದ ಮುಖಂಡರು ಮಾತನಾಡಿ ಮಾರ್ಗದರ್ಶನ ನೀಡಿದ್ದಾರೆ. ನಾನು ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ನನಗೆ ಶಕ್ತಿ ತುಂಬಲು ಎ.ಪಿ ರಂಗನಾಥ ಅವರನ್ನು ಆಯ್ಕೆಮಾಡಬೇಕಿದೆ. ಅ.೨೩ ರಂದು ನಡೆಯುವ ಚುನಾವಣೆಯಲ್ಲಿ ಮತದಾನಕ್ಕೆ ಎಲ್ಲಾ ಶಿಕ್ಷಕರು ಹಾಜರಾಗಬೇಕು. ಮತದಾನದ ಹಕ್ಕನ್ನು ತಪ್ಪಿಸಿಕೊಳ್ಳಬಾರದು ಎಂದರು.
ಎನ್ಡಿಎ ಅಭ್ಯರ್ಥಿ ಎ.ಪಿ ರಂಗನಾಥ ಮಾತನಾಡಿ, ಎನ್ಡಿಎ ಮೈತ್ರಿಕೂಟದ ಮುಖಂಡರೊಂದಿಗೆ ಚುನಾವಣೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು ೨೩೮೦೦ ಮತದಾರರು ಇದ್ದಾರೆ. ನನಗೆ ಒಂದು ಬಾರಿ ಅವಕಾಶ ನೀಡಿದರೆ ಶಿಕ್ಷಕರ ಪರವಾಗಿ ಕೆಲಸ ಮಾಡುವೆ. ಸೋತರು ಕೂಡ ಕೆಲಸ ಮಾಡಿರುವೆ ಅದನ್ನು ಮುಂದುವರೆಸುತ್ತೇನೆ. ಅನುದಾನ ರಹಿತ ಶಿಕ್ಷಕರಿಗೆ ಪ್ಯಾಕೇಜ್ ನೀಡಲು ಹೋರಾಟ ಈ ಹಿಂದೆ ಮಾಡಿರುವೆ. ಅನುದಾನರಹಿತ ಶಿಕ್ಷಕರಿಗೆ ಆರೋಗ್ಯ ವಿಮೆ ಕೊಡಿಸಲು ಕೆಲಸ ಮಾಡುತ್ತಿದ್ದೇನೆ. ಎನ್ಡಿಎ ಮೈತ್ರಿ ಕೂಟ ಗಟ್ಟಿಯಾಗಿದೆ. ದೊಡ್ಡಬಳ್ಳಾಪುರ ಶಾಸಕರು ನನ್ನ ಜತೆ ನಿಲ್ಲುವ ವಿಶ್ವಾಸವಿದೆ ಎಂದರು.
ತಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಗೌಡ ಮಾತನಾಡಿ ಎಂ ಎಲ್ ಸಿ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷದ ಮುಖಂಡರು ಒಮ್ಮತದಿಂದ ಕೆಲಸ ಮಾಡುತ್ತೇವೆ.ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಕೂಡ ಅದನ್ನು ಮರೆತು ಕೆಲಸ ಮಾಡುತ್ತೇವೆ. ರಂಗನಾಥ್ ಅವರು ಕಳೆದೆರಡು ಬಾರಿ ಅಲ್ಪ ಮತದಾನದಿಂದ ಸೋಲು ಕಂಡಿದ್ದರು. ಈ ಬಾರಿ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ. ಎಂಎಲ್ಸಿ ಚುನಾವಣೆಯ ಫಲಿತಾಂಶವೂ ಮುಂದಿನ ಚುನಾವಣೆಗಳ ದಿಕ್ಸೂಚಿಯಾಗಲಿದೆ ಎಂದರು
ಈ ವೇಳೆ ಮುಖಂಡರಾದ ಬಂತಿ ವೆಂಕಟೇಶ್, ನಾಗೇಶ್, ಮುದ್ದಪ್ಪ, ತ.ನ ಪ್ರಭುದೇವ್, ಕೆಂಪರಾಜು ಸೇರಿದಂತೆ ಮುಖಂಡರು ಹಾಜರಿದ್ದರು.




