
ದೊಡ್ಡಬಳ್ಳಾಪುರ:ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಲಯನ್ಸ್ ಸಂಸ್ಥೆ ಹಾಗೂ ವಿವಿಧ ವಿಭಾಗಗಳ ನೇತೃತ್ವದಲ್ಲಿ ಶುಕ್ರವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.
ಉಭಯ ನಾಯಕರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಸರ್ವಧರ್ಮ ಪ್ರಾರ್ಥನೆ ನಡೆಸಲಾಯಿತು.ಬಳಿಕ ಸಭೆಯನ್ನುದ್ದೇಶಿ ಮಾತನಾಡಿದ ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಮಹಾತ್ಮ ಗಾಂಧೀಜಿ ಅವರ ಚಿಂತನೆಗಳ ಸಾಕಾರದಿಂದ ಸದೃಢ, ಸಾಮರಸ್ಯ ಹಾಗೂ ಸಮನ್ವಯದ ಭಾರತ ನಿರ್ಮಾಣ ಸಾಧ್ಯ. ಸಮಕಾಲೀನ ಸಂದರ್ಭದಲ್ಲಿ ಗಾಂಧೀಜಿ ಅವರನ್ನು ಸ್ಮರಿಸುತ್ತಲೇ ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಹುನ್ನಾರಗಳು ನಡೆಯುತ್ತಿದ್ದು, ಪರ್ಯಾಯಗಳ ಹುಡುಕಾಟದಲ್ಲಿ ಗಾಂಧಿ ತತ್ವಗಳನ್ನು ನೇಪಥ್ಯಕ್ಕೆ ಸರಿಸುವ ಅಪಾಯಕಾರಿ ಮನೋಸ್ಥಿತಿ ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತದ ಭಾವನಾತ್ಮಕ ಮತ್ತು ಸಾಮಾಜಿಕ ಅಸ್ತಿತ್ವದ ಮೂಲಗಳನ್ನು ಅಲುಗಾಡಿಸುವ ಪ್ರಯತ್ನಗಳು ನಡೆಯುತ್ತಿದ್ದು, ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದವರನ್ನೂ ಆರಾಧಿಸುವ ಪರಿಪಾಠ ಬೆಳೆಯುತ್ತಿರುವುದು ಬೌದ್ದಿಕ ದಿವಾಳಿತನದ ಸಂಕೇತ. ಅಹಿಂಸೆ, ಶಾಂತಿ ಮತ್ತು ಸತ್ಯದ ಮೂಲಕ ಜಗತ್ತನ್ನು ಗೆಲ್ಲಲು ಸತ್ಯಾಗ್ರಹವೆಂಬ ಪ್ರಬಲ ಅಸ್ತ್ರವನ್ನು ಕೊಟ್ಟ ಗಾಂಧೀಜಿ ತಮ್ಮ ಬದುಕನ್ನೇ ಒಂದು ಸಂದೇಶವಾಗಿ ನೀಡಿದ್ದಾರೆ ಎಂದರು.
ಪ್ರಾಮಾಣಿಕತೆ, ಸರಳತೆಯ ಮೂಲಕ ದೇಶ ಸೇವೆಯನ್ನು ಪವಿತ್ರ ಕರ್ತವ್ಯವೆಂದು ಭಾವಿಸಿ ಉನ್ನತ ಆದರ್ಶಗಳನ್ನು ಕೊಟ್ಟ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಚಿಂತನೆಗಳನ್ನು ಎಲ್ಲರೂ ಪಾಲಿಸುವುದು ಅಗತ್ಯ ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಉಪಪ್ರಾಂಶುಪಾಲ ಡಾ.ಆರ್.ಎಂ.ಸುನಿಲ್ಕುಮಾರ್ ಮಾತನಾಡಿ, ಇಬ್ಬರೂ ಮಹನೀಯರು ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಅಮರ ಜೀವಿಗಳಾಗಿದ್ದಾರೆ. ಅವರ ಬದುಕಿನ ಸಂದೇಶದಲ್ಲಿ ಕೆಲವನ್ನಾದರೂ ನಮ್ಮ ಬದುಕಿನಲ್ಲಿ ಪಾಲನೆ ಮಾಡುವುದು ಅಗತ್ಯ ಎಂದು ಹೇಳಿದರು.
ಶೈಕ್ಷಣಿಕ ನಿರ್ದೇಶಕ ಡಾ.ಎಂ.ಶ್ರೀನಿವಾಸರೆಡ್ಡಿ, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಎನ್.ಬಿ.ಶಂಕರ್, ವಿಭಾಗ ಮುಖ್ಯಸ್ಥರಾದ ಡಾ.ಲೋಕೇಶ್ ಯಾದವ್, ಡಾ.ಬಸವರಾಜ್ ಪಾಲ್, ಪ್ರಾಧ್ಯಾಪಕ ಡಾ.ವಿಜಯಕಾರ್ತಿಕ್, ಜಾಲಪ್ಪ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ನರಸಿಂಹರೆಡ್ಡಿ, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಎನ್ಎಸ್ಎಸ್ ಅಧಿಕಾರಿ ಗೋವಿಂದರಾಜು, ವ್ಯವಸ್ಥಾಪಕ ಎಸ್.ಯತಿನ್ ಮತ್ತಿತರರು ಭಾಗವಹಿಸಿದ್ದರು.




