
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಕ್ಟೋಬರ್ 14ರಂದು ಆಯೋಜಿಸಿರುವ “ಧಮ್ಮ ದೀಕ್ಷಾ ಸಮಾರೋಪ” ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಸರ್ಕಾರಿ ಶಾಲಾ ಆವರಣದ ಬಳಕೆಯ ನಿಯಮಗಳು ಹಾಗೂ ಅಗತ್ಯ ಅನುಮತಿಗಳನ್ನು ಪರಿಶೀಲಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶ್ರೀರಾಮಸೇನಾ ಕರ್ನಾಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಶ್ರೀರಾಮಸೇನಾ ಕರ್ನಾಟಕದ ರಾಜ್ಯ ಧರ್ಮಪ್ರಚಾರಕರಾದ ಶ್ರೀನಿವಾಸ ಗುರೂಜಿ ಅವರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ (DDPI) ಹಾಗೂ ದೊಡ್ಡಬಳ್ಳಾಪುರ ಪೊಲೀಸ್ ವೃತ್ತ ನಿರೀಕ್ಷಕರಿಗೆ ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಿ, ಈ ಕುರಿತು ತುರ್ತು ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.
ಈ ಕುರಿತು ಮಾತನಾಡಿದ ರಾಜಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಕ್ಟೋಬರ್ 14ರ ಬುಧವಾರ ಬೆಳಿಗ್ಗೆ 10.30ಕ್ಕೆ ಬೌದ್ಧ ಧರ್ಮ ಸಮಾಜದ ವತಿಯಿಂದ ಧಮ್ಮ ದೀಕ್ಷಾ ಸಮಾರೋಪ ಕಾರ್ಯಕ್ರಮ ಆಯೋಜಿಸಿರುವುದಾಗಿ ಸಾರ್ವಜನಿಕ ಕರಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಆವರಣವನ್ನು ಧಾರ್ಮಿಕ ಕಾರ್ಯಕ್ರಮಕ್ಕಾಗಿ ಬಳಸಲು ಸಂಬಂಧಪಟ್ಟ ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಆಡಳಿತದಿಂದ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.
ಸರ್ಕಾರಿ ಶಾಲೆಗಳು ಸಾರ್ವಜನಿಕರ ತೆರಿಗೆ ಹಣದಿಂದ ನಿರ್ವಹಿಸಲ್ಪಡುವ ಶಿಕ್ಷಣ ಸಂಸ್ಥೆಗಳಾಗಿದ್ದು, ಅವುಗಳ ಆವರಣವನ್ನು ಯಾವುದೇ ಕಾರ್ಯಕ್ರಮಕ್ಕೆ ಬಳಸುವಾಗ ಅನ್ವಯಿಸುವ ನಿಯಮಗಳು ಮತ್ತು ಅನುಮತಿ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಲೆಗೆ ರಜೆ ಇರುವ ಅವಧಿಯಲ್ಲಿಯೂ ಶಾಲಾ ಆವರಣದ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ನಿರ್ಲಕ್ಷಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲೆಯ ಮುಖ್ಯ ಶಿಕ್ಷಕರ ಮೂಲಕ ಪರಿಶೀಲನೆ ನಡೆಸಬೇಕು. ಅನ್ವಯಿಸುವ ನಿಯಮಗಳಿಗೆ ವಿರುದ್ಧವಾಗಿ ಕಾರ್ಯಕ್ರಮ ಆಯೋಜಿಸಿರುವುದು ಕಂಡುಬಂದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸ ಗುರೂಜಿ ಮನವಿ ಮಾಡಿದರು.
ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಮನವಿ
ಪೊಲೀಸ್ ಇಲಾಖೆಗೆ ಸಲ್ಲಿಸಿರುವ ಪ್ರತ್ಯೇಕ ಮನವಿ ಪತ್ರದಲ್ಲಿ ಕಾರ್ಯಕ್ರಮದ ಅನುಮತಿ ಪತ್ರಗಳು, ಸ್ಥಳದ ಬಳಕೆಯ ಕಾನೂನುಬದ್ಧತೆ, ನಿರೀಕ್ಷಿತ ಜನಸಂದಣಿ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸುವಂತೆ ಕೋರಲಾಗಿದೆ. ಗ್ರಾಮದಲ್ಲಿ ಯಾವುದೇ ರೀತಿಯ ಉದ್ವಿಗ್ನತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ, ಸಾರ್ವಜನಿಕ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಮನವಿಯು ಯಾವುದೇ ಧರ್ಮ ಅಥವಾ ಸಮುದಾಯದ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರೋಧವಲ್ಲ; ಸರ್ಕಾರಿ ಶಿಕ್ಷಣ ಸಂಸ್ಥೆಗಳ ನಿಯಮಬದ್ಧ ಬಳಕೆ, ಕಾನೂನಿನ ಸಮಾನ ಅನುಷ್ಠಾನ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಉದ್ದೇಶ ಹೊಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಶ್ರೀನಿವಾಸ ಗುರೂಜಿ (ರಾಜ್ಯ ಧರ್ಮಪ್ರಚಾರಕರು, ಶ್ರೀರಾಮಸೇನೆ ಕರ್ನಾಟಕ), ಚಂದ್ರಶೇಖರ್ ಸೌಕಾರ್ (ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕರು), ಜಯರಾಮಯ್ಯ (ಮಾನವ ಹಕ್ಕುಗಳ ಮತ್ತು ಮಾಧ್ಯಮ ಸಂಘಟನೆಯ ರಾಜ್ಯಾಧ್ಯಕ್ಷರು, ಕಾರ್ಮಿಕ ಘಟಕ), ಸುರೇಶ್ ಸಿಂಗಂ (ಶ್ರೀರಾಮಸೇನೆಯ ಸಂಘಟನಾ ಪ್ರಧಾನ ಕಾರ್ಯದರ್ಶಿ) ಹಾಗೂ ಸಾಮಾಜಿಕ ಹೋರಾಟಗಾರ ನವೀನ್ ಭಾಗವಹಿಸಿದ್ದರು.




