
ದೊಡ್ಡಬಳ್ಳಾಪುರ : ಅನ್ನದಾತ ರೈತರು, ಯೋಧರು ದೇಶದ ಎರಡು ಕಣ್ಣುಗಳಿದ್ದಂತೆ. ಅವರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಶ್ರಮಿಸುವುದು ಪುಣ್ಯದ ಕೆಲಸ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಡಿಕ್ರಾಸ್ ಬಳಿ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಫಸಲ್ ಬಿಮಾ ಯೋಜನೆಯ ಪಾಲಿಸಿ ಪ್ರತಿಗಳನ್ನು ವಿತರಿಸುವ ರೈತ ಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಶಾಸಕ ಧೀರಜ್ ಮುನಿರಾಜು ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಇಂತಹ ಕಾರ್ಯಕ್ರಮಗಳು ಅನ್ನದಾತರಲ್ಲಿ ಆತ್ಮವಿಶ್ವಾಸ ತುಂಬಲಿವೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮುಖ್ಯಮಂತ್ರಿಯಾಗಿದ್ದು, ತಮ್ಮ ಆಡಳಿತಾವಧಿಯಲ್ಲಿ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಬಸವರಾಜ ಬೊಮ್ಮಾಯಿ ಅವರ ಸರಕಾರ ರೈತರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ವಿದ್ಯಾನಿ ಯೋಜನೆಯನ್ನು ಜಾರಿಗೊಳಿಸಿತ್ತು ಎಂದು ಸ್ಮರಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೀಕರ ನೆರೆಯಿಂದ ಮನೆ ಕಳೆದುಕೊಂಡವರಿಗೆ ೫ ಲಕ್ಷ ಪರಿಹಾರ ನೀಡಲಾಗಿತ್ತು. ಆದರೆ, ಈಗಿನ ಸರ್ಕಾರ ಬಡವರಿಗೆ ನಿವೇಶನ ಒದಗಿಸುವಲ್ಲಿ ವಿಫಲವಾಗಿದೆ. ವಿಕಲಚೇತನರು, ವೃದ್ಧರು ಮತ್ತು ವಿಧವೆಯರಿಗೆ ಪಿಂಚಣಿ ನೀಡುವಲ್ಲಿಯೂ ನಿರ್ಲಕ್ಷ್ಯ ತೋರುತ್ತಿದೆ. ವೀರ ಯೋಧರಿಗೆ ಗೌರವಧನ ನೀಡುವ ವಿಚಾರದಲ್ಲಿಯೂ ಸರಕಾರ ಗಮನಹರಿಸಿಲ್ಲ ಎಂದು ವಿಜಯೇಂದ್ರ ದೂರಿದರು. ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರದಿಂದ ಜನರಿಗೆ ನಿರೀಕ್ಷಿತ ಪ್ರಯೋಜನ ದೊರೆಯುತ್ತಿಲ್ಲ. ರೈತರು, ಬಡವರು ಮತ್ತು ದುರ್ಬಲ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ ಬರ ಪರಿಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಫಸಲ್ ಭೀಮಾ ಯೋಜನೆಯಡಿ ತಾಲೂಕಿನ ರೈತರ ವಿಮೆ ಪ್ರೀಮಿಯಂ ಒಟ್ಟು 30.70 ಲಕ್ಷ ಪಾವತಿಸಿದ್ದೇನೆ.ಒಂದು ಎಕರೆಗೆ ರೂ. 450 ಪ್ರಿಮಿಯಂ ಹಣ ಪಾವತಿಸಿದರೆ ಫಸಲ್ ಭೀಮಾ ಯೋಜನೆಯಡಿ ರೈತರಿಗೆ 22 ಸಾವಿರದವರೆಗೆ ಪರಿಹಾರ ದೊರೆಯುತ್ತದೆ. ಆದರೆ ಬರದಿಂದ ಕಂಗೆಟ್ಟಿರುವ ರೈತರು ಪ್ರಿಮೀಯಂ ಹಣ ಕಟ್ಟಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ರೈತರ ಪರ ನಿಲ್ಲಲು ನಿರ್ಧರಿಸಿ, ರೈತರು ಪಾವತಿಸಬೇಕಾದ ಪ್ರಿಮೀಯಂ ಮೊತ್ತವನ್ನು ಸರಕಾರವೇ ಭರಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಪತ್ರ ಬರೆದಿದ್ದೆ. ಆದರೆ, ಅಲ್ಲಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನಾನೇ ರೈತರ ಹಣ ಪಾವತಿಸಲು ನಿರ್ಧರಿಸಿ ಒಟ್ಟು 3೦.70 ಲಕ್ಷ ಪಾವತಿಸಿದ್ದೇನೆ ಎಂದರು.
ರೈತ ಜನಸ್ಪಂದನ ಕಾರ್ಯಕ್ರಮಕ್ಕೆ ಅಡ್ಡಿ ಪ್ರಯತ್ನ:
ರೈತ ಜನಸ್ಪಂದನ ಕಾರ್ಯಕ್ರಮಕ್ಕೆ ಕೆಲವರು ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ ಶಾಸಕ ಧೀರಜ್ ಮುನಿರಾಜ್, ಕೃಷಿ ಸಚಿವರ ನೇತೃತ್ವದಲ್ಲೇ ಕಾರ್ಯಕ್ರಮ ನಡೆಯಬೇಕೆಂದು ಕೆಲ ಅಕಾರಿಗಳ ಮೇಲೆ ದೂರವಾಣಿ ಮೂಲಕ ಒತ್ತಡ ಹೇರಲಾಗಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು ಕಾರ್ಯಕ್ರಮ ರದ್ದುಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ ಎಂದು ದೂರಿದರು. ಸೋತಿರುವವರು ಗೆಲ್ಲಲು ಸಾಧ್ಯವಾಗದೆ ತನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಸಂಸದ ಡಾ.ಕೆ ಸುಧಾಕರ್, ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್, ಪರಿಷತ್ ಸದಸ್ಯ ರಘು ಕೌಟಿಲ್ಯ, ವಿಭಾಗ ಪ್ರಭಾರಿ ಬ್ಯಾಟರಂಗೇಗೌಡ, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಬಮೂಲ್ ನಿರ್ದೇಶಕ ಬಿ.ಸಿ ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂತಿ ವೆಂಕಟೇಶ್ ಸೇರಿದಂತೆ ಅನೇಕರು ಹಾಜರಿದ್ದರು.




