
ದೊಡ್ಡಬಳ್ಳಾಪುರ: ಕೃಷಿಯಲ್ಲಿ ಲಾಭ, ನಷ್ಟ ಹಿಂದೆಯೂ, ಈಗಲೂ ಇದೆ. ಆದರೆ ಸದಾ ನಷ್ಟವನ್ನೇ ಮಾತನಾಡುತ್ತ ಇರುವ ಬದಲು ಕೃಷಿಯಲ್ಲೂ ಇದೆ ಲಾಭ ಅನ್ನುವ ಋಣಾತ್ಮಕ ಚಿಂತನೆ ಮೂಲಕ ಮುನ್ನಡೆಯಬೇಕು ಎಂದು ಗ್ರಾಮೀಣ ಹಾಗೂ ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಹೇಳಿದರು.
ಅವರು ತಾಲ್ಲೂಕಿನ ಮಧುರನಹೊಸಹಳ್ಳಿ ಸಮೀಪದ ತಬರನತೋಟದಲ್ಲಿ ಶನಿವಾರ ನಡೆದ ರೈತ ನಾಯಕ ದಿವಂಗತ ಡಾ.ಎನ್.ವೆಂಕಟರೆಡ್ಡಿ ಅವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ‘ಕೃಷಿಯಲ್ಲೂ ಇದೆ ಖುಷಿ’ ಕುರಿತು ಮಾತನಾಡಿದರು ಇತರೆ ಉದ್ಯಮಗಳಿಗೆ ಹೋಲಿಕೆ ಮಾಡಿದರೆ ಕೃಷಿಯಲ್ಲಿ ಒಂದಕ್ಕೆ ಮೂರು ಪಟ್ಟು ಆದಾಯ ಪಡೆಯಲು ಸಾಧ್ಯ ಇಲ್ಲ. ಆದರೆ ಒಂದು ಕುಟುಂಬ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ. ಇದಕ್ಕೆ ಒಂದಿಷ್ಟು ಪೂರ್ವ ಸಿದ್ದತೆ ಮುಖ್ಯ. ಹವಾಮಾನ ಬದಲಾವಣೆಯ ನೇರ ಪರಿಣಾಮಕ್ಕೆ ಮೊದಲು ಬಲಿಯಾಗುತ್ತಿರುವುದೇ ಕೃಷಿಕರು. ಈ ಬಗ್ಗೆ ರೈತರು ಎಚ್ಚರ ವಹಿಸಿ ಮೊದಲು ನಮ್ಮ ದಿನನಿತ್ಯದ ಜೀವನಕ್ಕೆ ಅಗತ್ಯ ಇರುವ ಸೊಪ್ಪು,ತರಕಾರಿ,ಧಾನ್ಯಗಳನ್ನು ಬಳೆದುಕೊಳ್ಳುವ ಕಡೆಗೆ ಆದ್ಯತೆ ನೀಡಬೇಕು. ಆ ನಂತರ ವಾಣಿಜ್ಯ ಬೆಳೆಯ ಕಡೆಗೆ ಗಮನವಹಿಸಬೇಕು. ಆಗ ಮಾತ್ರ ಆರೋಗ್ಯವಂತ, ನಮ್ಮೆದಿಯ ಜೀವನ ನಡೆಸಲು ಸಾಧ್ಯ ಎಂದರು.
ಕೃಷಿಯಲ್ಲಿ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ಪದ್ದತಿಗಳು, ಆಚರಣೆಗಳು, ಋತುಗಳಿಗೆ ತಕ್ಕಂತೆ ಇದ್ದ ಆಹಾರ, ಬೆಳೆಗಳು, ಬಿತ್ತನೆ ಬೀಜಗಳ ಸಂರಕ್ಷಣೆ ಹಾಗೂ ಜನಪದ ಹಾಡುಗಳ ಕುರಿತು ರೈತರೊಂದಿಗೆ ಮಾಹಿತಿ ಹಂಚಿಕೊಂಡರು.
ಸಂಘಟನೆಗಳಿಗೆ ಬೇಕಿದೆ ಹೊಸ ಹಾದಿ ಕುರಿತು ಐಟಿ ಉದ್ಯೋಗಿ ಜಿ.ರಾಜಶೇಖರ್ ಮಾತನಾಡಿ, ಕೃಷಿ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಈಗ ಆನ್ ಮೂಲಕ ಮೊಬೈಲ್ನಲ್ಲಿ ನೋಡಬಹುದು. ಕಂದಾಯ ಇಲಾಖೆಯ ಎಲ್ಲಾ ಕಾರ್ಯನಿರ್ವಹಣೆಗಳು ಇ-ಕಚೇರಿ ನಿರ್ವಹಣೆ ಮೂಲಕವೇ ನಡೆಯುತ್ತಿದೆ. ಆದರೆ ರೈತರಿಗೆ ಸರಿಯಾದ ಮಾಹಿತಿ ಇಲ್ಲದೆ ಸದಾ ತಾಲ್ಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ರೈತ ಸಂಘಟನೆಯ ಮೂಚೂಣಿ ನಾಯಕರು, ಕಾರ್ಯಕರ್ತರು ವಿವಿಧ ಇಲಾಖೆಗಳಲ್ಲಿನ ಯೋಜನೆಗಳು, ಅವುಗಳು ಕಾರ್ಯನಿರ್ವಹಣೆ ಮಾಡುವ ವಿಧಾನಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಸರ್ಕಾರಿ ಕಚೇರಿಗಳ ಅಲೆದಾಟ ತಪ್ಪುತ್ತದೆ. ಸಂಘಟನೆಗಳು ಪ್ರತಿಭಟನೆಗಳಿಗಷ್ಟೇ ಸೀಮಿತವಾಗದೆ ಹೊಸ ವಿಚಾರಗಳನ್ನು ಅರಿತುಕೊಂಡು ಮುನ್ನಡೆಯುವ ಕಡೆಗೂ ಗಮನವಹಿಸಬೇಕು. ಆಗ ಮಾತ್ರ ಸಂಘಟನೆ ಬೆಳೆಯಲು ಸಾಧ್ಯವಾಗಲಿದೆ ಎಂದರು.

ಸಂಘಟನೆ ಕಟ್ಟುವ ಸವಾಲುಗಳು ಕುರಿತು ಪತ್ರಕರ್ತ ನಟರಾಜ ನಾಗಸಂದ್ರ ಮಾತನಾಡಿ, ಯಾವುದೇ ಸಂಘಟನೆಯನ್ನು ಮುನ್ನಡೆಸುವ ಅಥವಾ ಹೋರಾಟದ ಮುಂದಾಳತ್ವ ವಹಿಸುವ ವ್ಯಕ್ತಿ ಕನಿಷ್ಠ ಮಟ್ಟದಲ್ಲಾದರು ಕುಟುಂಬದ ಕಡೆಗೆ ಆರ್ಥಿಕವಾಗಿ ಅನುಕೂಲಸ್ಥರಾಗಿರಬೇಕು. ಇಲ್ಲವಾದರೆ ಹೋರಾಟ, ಸಂಘಟನೆ ಕೆಲವೇ ವ್ಯಕ್ತಿಗಳಿಗೆ ಅಥವಾ ಬೇರೆಯವರ ಮೇಲೆ ಅವಲಂಭಿತವಾಗುತ್ತದೆ. ಮುಂಚೂಣಿಯಲ್ಲಿ ಇರುವವರು ಆರ್ಥಿಕ ಆಸೆಗೆ ಬಲಿಯಾಗುವುದು ಅನಿವಾರ್ಯವಾಗಲಿದೆ. ಸಂಘಟನೆಯನ್ನು ನಂಬಿ ಬರುವವರಿಗೆ ಸರ್ಕಾರಿ ಕಚೇರಿ, ಪೊಲೀಸ್ ಠಾಣೆಯಂತಹ ಕಡೆಗಳಲ್ಲಿ ತೊಂದರೆ ಅಥವಾ ನ್ಯಾಯಬದ್ದವಾದ ಕೆಲಸಗಳು ಆಗದೇ ಇರುವ ಸಂದರ್ಭದಲ್ಲಿ ಮುಖಂಡರು ಸ್ಪಂಧಿಸದೇ ಇದ್ದರೆ ದೀರ್ಘಾವಧಿವರೆಗೆ ಸಂಘಟನೆಯನ್ನು ಮುನ್ನಡೆಸುವ ಹಾಗೂ ಜನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಕಷ್ಟವಾಗಲಿದೆ.ಹೋರಾಟಗಳನ್ನು ಮುನ್ನಡೆಸುವವರಿಗೆ ರಾಜ್ಯ, ದೇಶದ ಆರ್ಥಿಕ ಬದಲಾವಣೆ ಸೇರಿದಂತೆ ಇಡೀ ಜಗತ್ತಿನಲ್ಲಿ ಆಗುತ್ತಿರುವ ರಾಜಕೀಯ, ಆರ್ಥಿಕ ಬದಲಾವಣೆಗಳ ಆಳವಾದ ಅಧ್ಯಯನದ ಅಗತ್ಯವಿದೆ. ಇದಕ್ಕೆ ಸತತ ಅಧ್ಯಯನ, ಓದು ಮುಖ್ಯ ಎಂದು ಹೇಳಿದರು.
ಹೋರಾಟದ ಸಂದರ್ಭದಲ್ಲಿ ಭಾಷೆಯ ಬಳಕೆ, ಘೋಷಣೆಗಳು ಅತ್ಯಂತ ತೀಕ್ಷಣ ಹಾಗೂ ಆಕರ್ಷಕವಾಗಿ ಬಳಸುವ ಕಡೆಗೆ ಪ್ರತಮ ಆದ್ಯತೆ ನೀಡಲೇಬೇಕಿದೆ. ಇತ್ತೀಚೆಗಿನ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧದ ಹೋರಾಟ ಹಾಗೂ ಎಸ್.ಐ.ಆರ್ ವಿರುದ್ಧ ನಡೆದ ಹೋರಾಟಗಳನ್ನು ಬಿಜೆಪಿ, ಕಾಂಗ್ರೆಸ್ ಅಥವಾ ಇತರೆ ವಿಚಾರಗಳನ್ನು ಬದಿಗಿಟ್ಟು ಹೋರಾಟದ ದೃಷ್ಠಿ ಕೋನದಿಂದ ಮಾತ್ರ ಜನಪರ ಸಂಘಟನೆಗಳು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದರು.
ಹಳೇ ಮಾದರಿಯ ಹೋರಾಟಗಳ ಜೊತೆಗೆ ಹೊಸ ಪೀಳಿಗೆಯ ಹೋರಾಟದ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಿದೆ. ಈಗ ಹೋರಾಟಕ್ಕೆ ಬರುವ ಜನ ಫಲಿತಾಂಶವನ್ನು ಶೀಘ್ರವಾಗಿ ನಿರೀಕ್ಷೆ ಮಾಡುತ್ತಾರೆ. ಕಾರಣ ವೇಗದ ಸಂವಹನ ಸೌಲಭ್ಯ, ವೇಗದ ಬದುಕಿನ ವಿಧಾನಗಳಿಂದಾಗಿ. ಇದಕ್ಕೆ ಸಂಘಟನೆಗಳು ಸಹ ಸಿದ್ದವಾಗದೇ ಇದ್ದರೆ ಹೋರಾಟಕ್ಕೆ ಬರುವವರ ಸಂಖ್ಯೆ ಸಹಜವಾಗಿಯೇ ಕ್ಷೀಣಿಸುತ್ತದೆ. ನಮ್ಮ ದೇಶವು ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇತ್ತೀಚೆಗೆ ನಡೆದ ಜೆನ್ ಝೀ ಹೋರಾಟಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಈ ಹೋರಾಟಗಳು ಸರಿ, ತಪ್ಪು ಅನ್ನುವ ವಿಶ್ಲೇಷಣೆ ಬೇರೆ ಎಂದು ಹೇಳಿದರು.
ರಾಜಕೀಯ ಪಕ್ಷಗಳು ಹೋರಾಟ, ಹೋರಾಟಗಾರರನ್ನು ದಾರಿತಪ್ಪಿಸಲು ಈ ಹಿಂದೆ ಬಳಸುತ್ತಿದ್ದ ವಿಧಾನಗಳನ್ನು ಬದಲಾಯಿಸಿಕೊಂಡು ಹೋರಾಟದ ಮುಂಚೂಣಿಯಲ್ಲಿರುವ ವ್ಯಕ್ತಿಯ ವೈಯಕ್ತಿಕ ತೇಜೋವದೆ, ಧಾರ್ಮಿಕ ಬಣ್ಣ ಬಳಿಯುವ ಮೂಲಕ ಹೋರಾಟ ಸ್ಥತಗಿತವಾಗುವಂತೆ,ಜನ ಸೇರದಂತೆ ಮಾಡುವ ಕಡೆಗೆ ಹೋರಟಿವೆ. ಈ ಬಗ್ಗೆ ಹೋರಾಟದ ಮುಖಂಡರು ಸದಾ ಎಚ್ಚರ ವಹಿಸಬೇಕಿದೆ. ಯಾವುದೇ ಹೋರಾಟ ಯಶಸ್ವಿಯಾಗಬೇಕಿದ್ದರೆ ಹೋರಾಟಕ್ಕೆ ಆಯ್ಕೆ ಮಾಡಿಕೊಳ್ಳುವ ವಿಷಯ, ಆ ವಿಷಯದ ಬಗ್ಗೆ ಆಳವಾದ ತಿಳುವಳಿಕೆ ಅಗತ್ಯ ಎಂದರು.
ಸ್ಮರಣೆ ಸಭೆಯಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ನಾಯ್ಕ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ,ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಮುಖಂಡರಾದ ಕೆ.ಸುಲೋಚನಮ್ಮ,ಮುತ್ತೇಗೌಡ, ಡಾ.ವಿಷ್ಣುವರ್ದನ ಹಾಜರಿದ್ದರು.




