
ದೊಡ್ಡಬಳ್ಳಾಪುರ : ಅಲ್ಪ ಸಂಖ್ಯಾತರಿಗೆ ಪ್ರತ್ಯೇಕ ಸೇನಾ ತರಬೇತಿ ನೀಡುವ ಟೆಂಡರ್ ರದ್ದುಗೊಳಿಸುವ ಕುರಿತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-2022 ಮತ್ತು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ ಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯದ ಅಥವಾ ದುರ್ಬಲಗೊಳಿಸದೆ ಯಥಾವತ್ತಾಗಿ ಮುಂದುವರಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳದ ಜಿಲ್ಲಾ ಸಂಯೋಜಕ ಭಾಸ್ಕರ್ ಭಗತ್ ಒತ್ತಾಯಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಮುಖೇನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು 2026-27ನೇ ಸಾಲಿನಲ್ಲಿ ಕೇವಲ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ 60 ದಿನಗಳ ಸೇನಾ ತರಬೇತಿ ನೀಡಲು ಅಲ್ಪಾವಧಿ ಟೆಂಡರ್ ಕರೆದಿರುವುದು ಅತ್ಯಂತ ಆಘಾತಕಾರಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿ ಕೇವಲ ಒಂದು ನಿರ್ದಿಷ್ಟ ಧಾರ್ಮಿಕ ಗುಂಪಿಗೆ ಮಾತ್ರ ರಕ್ಷಣಾ ಸಂಬಂಧಿತ ತರಬೇತಿ ನೀಡುವುದು ಮತ್ತು ಹಿಂದೂ ಸೇರಿದಂತೆ ಇತರ ಸಮುದಾಯಗಳ ಅರ್ಹ ಬಡ ವಿದ್ಯಾರ್ಥಿಗಳನ್ನು ಇದರಿಂದ ಹೊರಗಿಡುವುದು ಭಾರತೀಯ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಹಾಗೂ ವಿಧಿ 15(1) (ಧರ್ಮದ ಆಧಾರದ ಮೇಲೆ ತಾರತಮ್ಯ ನಿಷೇಧ) ರ ಸ್ಪಷ್ಟ ಉಲ್ಲಂಘನೆಯಾಗಿದೆ ಇದನ್ನು ರಾಜ್ಯದ ಶಾಂತಿ, ಸುವ್ಯವಸ್ಥೆ, ಸಾಂವಿಧಾನಿಕ ಸಮಾನತೆ ಮತ್ತು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಖಂಡಿಸುತ್ತದೆ ಎಂದರು.
ಭಾರತೀಯ ಸೇನೆಯು ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆಯ ಸಂಕೇತವಾಗಿದೆ. ದೇಶ ರಕ್ಷಣೆಗೆ ಸಿದ್ಧರಾಗುವ ಯುವಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಿ ಪ್ರತ್ಯೇಕ ತರಬೇತಿ ನೀಡುವುದು ಸಂವಿಧಾನದ ವಿಧಿ 51A(c) ಮತ್ತು 51A(e) ಅಡಿಯಲ್ಲಿನ ರಾಷ್ಟ್ರೀಯ ಭಾವೈಕ್ಯತೆಯ ಮೂಲಭೂತ ಕರ್ತವ್ಯಗಳಿಗೆ ತೀರ ವಿರುದ್ಧವಾಗಿದೆ.ಕೇಂದ್ರ ರಕ್ಷಣಾ ಸಚಿವಾಲಯ, ಭಾರತೀಯ ಸೇನೆ ಅಥವಾ ನಿರ್ದೇಶನಾಲಯದ ಯಾವುದೇ ಸಮಾಲೋಚನೆ ಮತ್ತು ಮೇಲಿ ಚಾರಣೆ ಇಲ್ಲದೆ ಖಾಸಗಿ ಸಂಸ್ಥೆಗಳ ಮೂಲಕ ಸೇನಾ ಮಾದರಿಯ ತರಬೇತಿ ನೀಡುವುದು ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯವನ್ನು ತಂದೊಡ್ಡಬಹುದು ಎಂದು ಆರೋಪಿಸಿದರು.
ಸರ್ಕಾರಕ್ಕೆ ನಿಜವಾಗಿಯೂ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶವಿದ್ದರೆ, ಧರ್ಮದ ಬದಲಾಗಿ ‘ಆರ್ಥಿಕ ಹಿಂದುಳಿದಿರುವಿಕೆ’ಯ ಮಾನದಂಡದ ಮೇಲೆ ಶಾಲಾ-ಕಾಲೇಜುಗಳು ಹಾಗೂ ಅಧಿಕೃತ ಎನ್ನಿಸಿಕೊಂಡಿರುವ (NCC) ಮೂಲಕ ಎಲ್ಲಾ ಸಮುದಾಯಗಳ ಅರ್ಹ ವಿದ್ಯಾರ್ಥಿಗಳಿಗೆ ಸಮಾನ ತರಬೇತಿ ನೀಡಬೇಕು.ಅಲ್ಪಸಂಖ್ಯಾತರ ನಿರ್ದೇಶನಾಲಯವು ತಕ್ಷಣವೇ ಈ ಟೆಂಡರ್ ಅನ್ನು ರದ್ದುಗೊಳಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಈ ಮೂಲಕ ತೀವ್ರವಾಗಿ ಆಗ್ರಹಿಸುತ್ತದೆ ಎಂದರು.
ಈ ವೇಳೆ ಕೋಲಾರ ವಿಭಾಗ ಸಂಯೋಜಕ ಕೃಷ್ಣಮೂರ್ತಿ, ಜಿಲ್ಲಾ ಸಂಯೋಜಕ ಭಾಸ್ಕರ್ ಭಗತ್, ಜಿಲ್ಲಾ ಸಹ ಸಂಯೋಜಕ ಶಿವಾಜಿ ಮಣಿ , ಜಿಲ್ಲಾ ಮಾತೃ ಶಕ್ತಿ ಪ್ರಮುಖರಾದ ಮಂಜುಳ, ಸಿದ್ದು ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.




