
ದೊಡ್ಡಬಳ್ಳಾಪುರ : ನಮ್ಮ ವಿಶೇಷ ದಿನಗಳ ಸಂಭ್ರಮಾಚರಣೆ ಸಮಾಜಕ್ಕೆ ಮಾದರಿಯಾಗಿರಬೇಕು, ಜನಸೇವೆ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇಂದು ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ನಿರ್ಗತಿಕ ಕಡುಬಡವರಿಗೆ ವಯೋವೃದ್ದರಿಗೆ ಆಹಾರ ವಿತರಣೆ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಆಚರಿಸಿಕೊಳ್ಳಲಾಗಿದೆ ಎಂದು ಮಾಜಿ ನಗರಸಭಾ ಸದಸ್ಯ ಎನ್ ಕೆ ರಮೇಶ್ ತಿಳಿಸಿದರು

ದರ್ಗಾ ಜೋಗಹಳ್ಳಿಯಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸೋಹ ಸಮಿತಿಯ 2341ನೇ ದಿನದ ಅನ್ನದಾಸೋಹ ದಾನಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ನಿಸ್ವಾರ್ಥ ಸೇವೆ ಮಾಡಲು ಯಾವುದೇ ಅಧಿಕಾರದ ಅವಶ್ಯಕತೆ ಇಲ್ಲ ಸೇವೆ ಮಾಡುವ ಮನಸ್ಸಿರಬೇಕು ಅಷ್ಟೇ , ನನ್ನ ಮಿತ್ರರ ಹಾಗೂ ಹಿತೈಷಿಗಳ ಮಾರ್ಗದರ್ಶನದಂತೆ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಿಕೊಂಡಿದ್ದೇನೆ ಅಲ್ಲದೆ ಪುಟಾಣಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ನೋಟ್ ಬುಕ್, ಪೆನ್ ಸೇರಿದಂತೆ ಇತರೆ ಪರಿಕರಗಳ ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡಿರುವುದು ಸಂತಸ ತಂದಿದೆ ಎಂದರು.

ಯುವ ಮುಖಂಡ ತರುಣ್ ಸರ್ಜಾ ಮಾತನಾಡಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ ಎನ್ ಕೆ ರಮೇಶ್ ರವರು ತಮ್ಮ ಹುಟ್ಟುಹಬ್ಬವನ್ನು ಎಂದು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಸಂಭ್ರಮಾಚರಣೆ ದುಂದು ವೆಚ್ಚದ್ದಾಗದೆ ಇತರರಿಗೆ ಸಹಾಯ ಮಾಡುವ ಮೂಲಕ ಆಚರಿಸಬೇಕು ಎಂಬುದು ನಮ್ಮ ಉದ್ದೇಶ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ನಮ್ಮ ಕೈಲಾದ ಸೇವೆ ಮಾಡಿದ್ದೇವೆ ಮುಂದೆಯೂ ನಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸುವ ನಿರ್ಧಾರ ಮಾಡಿದ್ದೇವೆ ಎಂದರು.
ಕನ್ನಡಪರ ಹೋರಾಟಗಾರ ನಾಗರಾಜ್ ಮಾತನಾಡಿ ಸಾಮಾನ್ಯ ಶಿಕ್ಷಕರ ಮಗನಾಗಿ ಹುಟ್ಟಿದ ಎನ್ ಕೆ ರಮೇಶ್ ಇಂದು ದೊಡ್ಡಬಳ್ಳಾಪುರ ನಗರಸಭೆ ಸದಸ್ಯರಾಗಿ ಜನತೆಗೆ ಸೇವೆ ಸಲ್ಲಿಸುತ್ತಿರುವುದು ಸಾಧಾರಣ ವಿಷಯವಲ್ಲ ತಮ್ಮ ಜೀವನವನ್ನು ಜನಸೇವೆಗಾಗಿ ಮುಡಿಪಿಟ್ಟಿದ್ದಾರೆ ಅವರ ಮುಂದಿನ ಜೀವನವೂ ಸುಖಮಯವಾಗಿರಲಿ ದೇವರು ಅವರಿಗೆ ಮತ್ತಷ್ಟು ಉತ್ತಮ ಸ್ಥಾನ ಲಭಿಸುವಂತೆ ಆಶೀರ್ವದಿಸಲಿ ಅವರ ಜನಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು

ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ಸದಾ ದಾನಿಗಳ ನೆರವಿನಿಂದ ನಡೆಯುವ ಈ ನಿರಂತರ ಅನ್ನದಾಸೋಹ ಕಾರ್ಯಕ್ರಮವು ನೂರಾರು ಕುಟುಂಬಗಳಿಗೆ ಆಸರೆಯಾಗಿದೆ ಕಾರ್ಯಕ್ರಮದಲ್ಲಿ ದಾನಿಗಳಾಗಿ ಭಾಗವಹಿಸಲು ಇಚ್ಛಿಸುವ ಎಲ್ಲಾ ಮನಸ್ಸುಗಳಿಗೆ ಆತ್ಮೀಯವಾಗಿ ಸ್ವಾಗತ ಕೋರುತ್ತೇವೆ ತಮ್ಮ ವಿಶೇಷ ದಿನಗಳನ್ನು ನಮ್ಮೊಂದಿಗೆ ಆಚರಿಸಿ, ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ವಯೋವೃದ್ದರಿಗೆ ಹಸಿದವರಿಗೆ ನೆರವಾಗಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರರಾದ ಸುರೇಶ್ ಸಿಂಗಂ, ನಾಗರಾಜ್, ಯುವ ಮುಖಂಡ ತರುಣ್ ಸರ್ಜಾ, ಗಿರೀಶ್, ಎಚ್.ರಾಘವೇಂದ್ರ, ಎಚ್. ಶಿವಕುಮಾರ್, ಕಿರಣ್ ಶೆಟ್ಟಿಗಾರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.




