
ತೂಬಗೆರೆ : ಸಹಕಾರಿ ಸಂಘಗಳಲ್ಲಿ ಜಾತಿ, ಪಕ್ಷ ಹಾಗೂ ವೈಯಕ್ತಿಕ ಭೇದಭಾವಗಳಿಗೆ ಅವಕಾಶ ನೀಡದೆ, ಸಂಘದ ಅಭಿವೃದ್ಧಿ ಮತ್ತು ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ತೂಬಗೆರೆ ಹೋಬಳಿಯ ಕುರುವಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ ಗ್ರಾಮೀಣ ರೈತರು ಹಾಗೂ ಕುಟುಂಬಗಳಿಗೆ ನಿರಂತರ ಆದಾಯ ಒದಗಿಸುವ ಪ್ರಮುಖ ವೃತ್ತಿಯಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಬಲಿಷ್ಠವಾದರೆ ಗ್ರಾಮೀಣ ಆರ್ಥಿಕತೆಯೂ ಮತ್ತಷ್ಟು ಸದೃಢವಾಗಲಿದೆ ಎಂದರು.
ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ನಿರ್ದೇಶಕ ಬಿ.ಸಿ.ಆನಂದಕುಮಾರ್ ಮಾತನಾಡಿ, ಬಡ ಹಾಗೂ ಸಣ್ಣ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ರೈತರಿಗೆ ಜಾನುವಾರು ವಿಮೆ, ಉಪಕರಣಗಳ ಖರೀದಿಗೆ ಹೆಚ್ಚಿನ ಸಬ್ಸಿಡಿ ಹಾಗೂ ಗುಣಮಟ್ಟದ ಪಶು ಆಹಾರವನ್ನು ಕೈಗೆಟುಕುವ ದರದಲ್ಲಿ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತದಲ್ಲಿ ಸಾಧ್ಯವಾದ ಕಡೆಗಳಲ್ಲಿ ಚುನಾವಣೆಗಿಂತ ಅವಿರೋಧ ಆಯ್ಕೆಗೆ ಆದ್ಯತೆ ನೀಡುವುದು ಉತ್ತಮ. ಇದರಿಂದ ಅನಗತ್ಯ ಪೈಪೋಟಿ ಹಾಗೂ ಭಿನ್ನಾಭಿಪ್ರಾಯಗಳಿಗೆ ಅವಕಾಶ ಕಡಿಮೆಯಾಗಿ, ರೈತರ ಹಿತಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರು ಮತ್ತು ಹಾಲು ಉತ್ಪಾದಕ ರೈತರನ್ನು ಸನ್ಮಾನಿಸಿ ಹಾಲಿನ ಕ್ಯಾನ್ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಕುರುವಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ. ಮುರುಳಿ ಕುಮಾರ್, ಸಂಸ್ಥಾಪಕ ಅಧ್ಯಕ್ಷ ಎ. ನರಸಿಂಹಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ತೆಂಗು ನಾರು ಮಂಡಳಿ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು, ನಿವೃತ್ತ ಪಿಡಿಓ ರಂಗಸ್ವಾಮಿ, ಮುಖಂಡರಾದ ಚಂದ್ರಣ್ಣ, ದೇವರಾಜ್, ಭೈರೇಗೌಡ, ಮಂಜುನಾಥ, ಮುನೇಗೌಡ, ಅಶೋಕ್, ಗೌರೀಶ್, ರಾಮಣ್ಣ ಯುವ ಮುಖಂಡ ಉದಯ ಆರಾಧ್ಯ, ಸಂಘದ ನಿರ್ದೇಶಕರು, ಕಾರ್ಯದರ್ಶಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




