
ದೊಡ್ಡಬಳ್ಳಾಪುರ: ಹಾದ್ರೀಪುರ ಗ್ರಾಮ ಪಂಚಾಯತಿಯಲ್ಲಿ ರಾತ್ರಿ 8:30 ಆದರೂ ಅಮಾನತು ಆಗಿದ್ದ ಪಿಡಿಓ ಕೆಲಸ ಮಾಡುತ್ತಿದ್ದ ಘಟನೆ ನಡೆದಿದೆ. ಅದರಲ್ಲಿ ಕೆಲಸದ ವೇಳೆ ಕಚೇರಿಯಲ್ಲಿ ಕರೆಂಟ್ ಆಫ್ ಮಾಡಿಕೊಂಡು ಸಿಬ್ಬಂದಿಗಳನ್ನು ಕೂರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಸ್ಥಳೀಯರು ಪ್ರಶ್ನೆ ಮಾಡಿದರೆ ಅಡಿಟಿಂಗ್ ಮಾಡೋದಾಗಿ ಸಬೂಬು ನೀಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಹಾಲಿ ಪಂಚಾಯತಿ ಪಿಡಿಓ ನಂದಿನಿ ಇಲ್ಲದೇ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದೇ ಪಂಚಾಯತಿಯಲ್ಲಿ ಈ ಹಿಂದೆ ಭ್ರಷ್ಟಾಚಾರ ಮಾಡಿ ಸಸ್ಪೆಂಡ್ ಆಗಿದ್ದ ಪಿಡಿಒ ಶಿವಾನಂದ ಮಡಕೇರಿ ಅಮಾನತ್ತಾಗಿ ಸಾಸಲು ಪಂಚಾಯ್ತಿಗೆ ವರ್ಗಾವಣೆ ಆಗಿದ್ದು, ಈಗ ಹಾದ್ರಿಪುರ ಗ್ರಾಮ ಪಂಚಾಯ್ತಿಗೆ ಬಂದು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ವಿಚಾರವಾಗಿ ಹಾದ್ರೀಪುರ ಮುಖಂಡ ಮಹೇಶ್ ಗೌಡ ಮಾತನಾಡಿ, ಹಿಂದೆ ಇದ್ದ ಶಿವಾನಂದ ಮರಿಕೇರಿ ವಿರುದ್ಧ, ಇಖಾತೆ ವಿಚಾರವಾಗಿ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು, ಲಂಚ ಸ್ವೀಕರಿಸುವ ವಿಡಿಯೋ ವೈರಲ್ ಆಗಿ ಅದನ್ನ ಇಓ ಜಿಲ್ಲಾ ಪಂಚಾಯತಿ ಸಿಇಓ ಗೆ ಲೆಟರ್ ಬರೆದು ಅವರನ್ನ ಕೆಲಸದಿಂದ ಅಮಾನತು ಮಾಡಲಾಗಿತ್ತು. ಹಾಗಿದ್ದರೂ ಕೂಡ ಈಗ ರಾತ್ರಿ ವೇಳೆ ಬಂದು ಪಂಚಾಯತಿಯಲ್ಲಿ ಕೆಲಸ ಮಾಡುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಅಲ್ಲದೆ ಕರೆಂಟ್ ಆಫ್ ಮಾಡಿಕೊಂಡು ಕೆಲಸ ಮಾಡುವ ಅನಿವಾರ್ಯ ಅಧಿಕಾರಿಗಳಿಗೆ ಏನಿತ್ತು. ಅವರು ಸರಿಯಾಗಿ ಕೆಲಸ ಮಾಡುತ್ತಿದ್ದರೆ, ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಅಲ್ಲಿಂದ ಎದ್ದು ಹೋಗದೆ ಉತ್ತರ ನೀಡಬಹುದಿತ್ತಲ್ಲಾ, ಪ್ರಶ್ನೆ ಮಾಡುತ್ತಿದ್ದಂತೆ ಸ್ಥಳದಿಂದ ಏಕೆ ಅವರು ಎದ್ದು ಹೋದರು, ಹಾಗಾಗಿ ಇವರು ಯಾವುದಾದರೂ ದಾಖಲೆಗಳನ್ನು ತಿದ್ದಿರುವ ಅನುಮಾನವಿದೆ. ಹಾಗಾಗಿ ಮೇಲಾಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಹಾದ್ರೀಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಂದಿನಿ ನಿನ್ನೆ ಪಂಚಾಯ್ತಿಯಲ್ಲಿ ಅಡಿಟಿಂಗ್ ಇತ್ತು. ಅಧಿಕಾರಿಗಳು ಸಂಜೆ 5 ಗಂಟೆಗೆ ಬಂದರು ಆದ ಕಾರಣ ಲೇಟಾಯ್ತು. ಸಂಜೆ 7:30ರವೆರೆಗೂ ನಾನೂ ಪಂಚಾಯ್ತಿಯಲ್ಲೇ ಇದ್ದೆ.. ನಾನು ಹೋದ ಕೆಲವೇ ನಿಮಿಷಗಳಲ್ಲಿ ಹೀಗಾಗಿದೆ ಎಂದರು.




