
ದೊಡ್ಡಬಳ್ಳಾಪುರ : 130 ವಿದ್ಯಾರ್ಥಿಗಳಿರುವ ಶಾಲೆಗೆ ಸರಿಯಾದ ಶಿಕ್ಷಕರಿಲ್ಲ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆಯಾಗದಂತೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ವಹಿಸಬೇಕೆಂದು ಹಾಗೂ ಕೂಡಲೇ ಶಿಕ್ಷಕರನ್ನು ನೇಮಿಸುವಂತೆ ಕೋರಿ ಇಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ( ವೈರ್ ) ತಿಳಿಸಿದರು.
ತಾಲೂಕು ಮಟ್ಟದ ಪದಾಧಿಕಾರಿಗಳ ಜೊತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಮುಖರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು ಮಕ್ಕಳ ಕಲಿಕೆಗೆ ಸುಸಜ್ಜಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಪೋಷಕರ ಧ್ವನಿಯಾಗಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಶ್ರಮಿಸುತ್ತಿದೆ ಈ ನಿಟ್ಟಿನಲ್ಲಿ ತಾಲೂಕು ಉಪಾಧ್ಯಕ್ಷರಾದ ಜೆ.ಶಿವಕುಮಾರ್ ನೇತೃತ್ವದಲ್ಲಿ ನಗರದ ರಾಜೀವ್ ಗಾಂಧಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂಬ ಮಾಹಿತಿ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೂಡಲೇ ಶಿಕ್ಷಕರ ನೇಮಿಸುವಂತೆ ಕೋರಿ ಮನವಿ ಸಲ್ಲಿಸಲಾಗಿದೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶಿಕ್ಷಕರು ನೇಮಿಸುವ ಭರವಸೆ ನೀಡಿದ್ದಾರೆ ಎಂದರು

ತಾಲ್ಲೂಕು ಉಪಾಧ್ಯಕ್ಷ ಜೆ. ಶಿವಕುಮಾರ್ ಮಾತನಾಡಿ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಲ್ಲಿ ಒಟ್ಟು 130 ಮಕ್ಕಳಿದ್ದು. ಶಾಲೆಯಲ್ಲಿ ಕೇವಲ 3 ಜನ ಶಿಕ್ಷಕರಿದ್ದಾರೆ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಗೆ ಅಗತ್ಯ ಶಿಕ್ಷಕರನ್ನು ನೇಮಿಸಬೇಕೆಂದು ಈ ಮೂಲಕ ಮನವಿ ಮಾಡಿದ್ದೇವೆ ಎಂದರು.
ಶಿಕ್ಷಕರ ಕೊರತೆ ಕೇವಲ ಒಂದು ಶಾಲೆಯಲ್ಲಿ ಇಲ್ಲ, ತಾಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿ ಈ ಸಮಸ್ಯೆ ಇದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಸೌಲಭ್ಯ ಕಲ್ಪಿಸಲಿ ಎಂಬುದು ನಮ್ಮ ಉದ್ದೇಶ ಇಂದು ಸಂಘಟನೆ ವತಿಯಿಂದ ಸಾಂಕೇತಿಕವಾಗಿ ಮನವಿ ಸಲ್ಲಿಸಿದ್ದೇವೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಕೊರತೆಗಳನ್ನು ಅಧಿಕಾರಿಗಳು ಸರಿಪಡಿಸದೆ ಇದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಲಯನ್ ಎ.ನಂಜಪ್ಪ, ತಾಲೂಕು ಅಧ್ಯಕ್ಷ ಶಿವಕುಮಾರ್ (ವೈರ್), ತಾಲೂಕು ಉಪಾಧ್ಯಕ್ಷ ಜೆ.ಶಿವಕುಮಾರ್, ಪದಾಧಿಕಾರಿಗಳಾದ ಪ್ರಮೋದ್, ಮಂಜುನಾಥ್, ಗೋಪಿ, ಅನಿಲ್, ನಗರಾಧ್ಯಕ್ಷ ಚಂದ್ರು, ನಗರ ಪ್ರಧಾನ ಕಾರ್ಯದರ್ಶಿ ವೆಂಕೋಬ ವೇಣು, ರಾಜು, ಮಹಿಳಾ ಜಿಲ್ಲಾ ಮುಖಂಡರಾದ ಕಂದಮಣಿ, ತಾಲೂಕು ಮುಖಂಡರಾದ ಪದ್ಮಾ,ನಾಗಮಣಿ,ಶಶಿಕಲಾ ಸೇರಿದಂತೆ ಹಲವರು ಹಾಜರಿದ್ದರು.




