
ದೊಡ್ಡಬಳ್ಳಾಪುರ : ನಗರದ ೩೧ ವಾರ್ಡ್ ಗಳಲ್ಲಿಯೂ ಮನೆಗಳ ಮೇಲೆ ಕನ್ನಡದ ಬಾವುಟ ಹಾರಿಸುವ ಕೆಲಸ ಮಾಡಬೇಕು. ಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಸಾಹಿತಿಗಳು, ಬರಹಗಾರರು, ಕವಿಗಳು, ಸೇರಿದಂತೆ ಕನ್ನಡಿಗರ ಸಾಧನೆಗಳನ್ನೋಳಗೊಂಡ ಪುಸ್ತಕಗಳನ್ನು ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ವಿತರಿಸಬೇಕು ಎಂದು ಕನ್ನಡ ಪರ ಹೋರಾಟಗಾರ ತ.ನಾ. ಪ್ರಭುದೇವ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು.
ಕನ್ನಡ ಪರ ಹೋರಾಟಗಾರ ಗಂಗರಾಜು ಶಿರವಾರ ಮಾತನಾಡಿ ಈ ಬಾರಿಯ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು. ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಅಭಿನಂದಿಸಿ, ಅವರ ಸಾಧನೆಗಳನ್ನು ಸಭಿಕರಿಗೆ ತಿಳಿಸಬೇಕು. ಕಾಟಾಚರಕ್ಕೆ ಅಭಿನಂದನೆ ಮಾಡಬಾರದು, ಆಯ್ಕೆ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಮತ್ತು ನಗರ, ತಾಲ್ಲೂಕಿನಾದ್ಯಂತ ಇರುವ ಇಂಗ್ಲೀಷ್ ನಾಮಫಲಕಗಳನ್ನು ತೆಗೆದುಹಾಕಬೇಕು. ಅಧಿಕಾರಿಗಳು ಇದರ ಬಗ್ಗೆ ಇಚ್ಛಾಶಕ್ತಿ ಪ್ರದರ್ಶಿಸಿ ಕ್ರಮ ಜರುಗಿಸಬೇಕು. ಕನ್ನಡದ ವಾತಾವರಣ ಸೃಷ್ಟಿ ಮಾಡಿ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದರು.

ಆಯ್ಕೆ ಸಮಿತಿ ಬದಲಿಸಿ ಹೊಸಬರಿಗೆ ಅವಕಾಶ ಕೊಡಿ
ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಮುಖಂಡರು ಆಯ್ಕೆ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು ಹಾಗೂ ಈ ಬಾರಿ ಹೊಸಬರಿಗೆ ಆಯ್ಕೆ ಸಮಿತಿಯಲ್ಲಿ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಹಿರಿಯ ಕನ್ನಡ ಪರ ಹೋರಾಟಗಾರ ಸಂಜೀವನಾಯಕ್ ಮಾತನಾಡಿ ತಾಲ್ಲೂಕಿನ ಎಲ್ಲಾ ಕನ್ನಡ ಪರ ಹೋರಾಟಗಾರರು ಸಭೆ ನಡೆಸಿ, ನಗರದಲ್ಲಿರುವ ಆಂಗ್ಲಭಾಷೆಯ ನಾಮಫಲಕಗಳನ್ನು ತೆಗೆದುಹಾಕುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಿ, ನವೆಂಬರ್ ತಿಂಗಳಲ್ಲಿಯೇ ತೆರವು ಮಾಡಲು ಮುಂದಾಗಬೇಕು. ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಕಡ್ಡಾಯವಾಗಿ ಶಿಸ್ತುಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಕನ್ನಡ ಪರ ಹೋರಾಟಗಾರ ಎ. ನಂಜಪ್ಪ ಮಾತನಾಡಿ ಕನ್ನಡಪರ ಸಂಘಟನೆಗಳು ಕಟ್ಟುವ ಬ್ಯಾನರ್ ಗಳನ್ನು ಎರಡು ಮೂರು ದಿನಗಳಲ್ಲಿ ತೆಗೆದುಹಾಕುವ ನಗರಸಭೆ ಅಧಿಕಾರಿಗಳು ರಾಜಕಾರಣಿಗಳ ಬ್ಯಾನರ್ ಗಳನ್ನು 15 ದಿನಗಳಾದರೂ ಮುಟ್ಟುವುದಿಲ್ಲ ಏಕೆ… ಎಂದು ಪ್ರಶ್ನಿಸಿದರು ಹಾಗೂ ಇತ್ತೀಚಿನ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ಕಟ್ಟುತ್ತಿರುವ ಬ್ಯಾನರ್ ಗಳಲ್ಲಿ ಕನ್ನಡ ಮಾಯವಾಗುತ್ತಿದೆ ಬರಬರುತ್ತಾ ಸಂಪೂರ್ಣ ಇಂಗ್ಲಿಷ್ ಮಾಯವಾಗುವುದರಲ್ಲಿ ಸಂಶಯವಿಲ್ಲ ಇದನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎಂದರು.
ತಹಶೀಲ್ದಾರ್ ಮಲ್ಲಪ್ಪ ಯರಗೋಳ ಮಾತನಾಡಿ ಮಳೆ ಬರುವ ಸಾಧ್ಯತೆ ಇರುವುದರಿಂದ ಬಯಲು ಪ್ರದೇಶದಲ್ಲಿ ಮಾಡುವ ಬದಲಾಗಿ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸುವುದು ಸೂಕ್ತವಾಗಿದೆ ಎಂದರು. ಸಭಿಕರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಮಲ್ಲಪ್ಪ ಯರಗೋಳ, ತಾಲ್ಲೂಕು ಪಂಚಾಯತಿ ಇಓ ಮಂಜುನಾಥ ಹರ್ತಿ, ಪೌರಾಯುಕ್ತ ಕಾರ್ತಿಕೇಶ್ವರ್, ಕನ್ನಡಪರ ಹೋರಾಟಗಾರರಾದ ತ.ನ ಪ್ರಭುದೇವ, ಸಂಜೀವನಾಯಕ್, ರಾಜಘಟ್ಟ ರವಿ, ಪ್ರಮೀಳಮಹದೇವ, ಮುನಿಪಾಪಯ್ಯ,ಅಗ್ನಿ ವೆಂಕಟೇಶ್ ವೆಂಕಟೇಶ್,ಎ.ನಂಜಪ್ಪ, ಜೆ. ಶಿವಕುಮಾರ್, ಮತ್ತಿತ್ತರರು ಹಾಜರಿದ್ದರು.




